* ಸಂಘಟನೆಗಳು ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗದಿರಲಿ – ಆರ್.ಪಿ.ರವಿಶಂಕರ್
ರಾಮನಗರ/ಚನ್ನಪಟ್ಟಣ-22/09/2024: ದಶಕಗಳ ಹಿಂದೆ ಆರ್ಯವೈಶ್ಯ ಸಮುದಾಯದ ಹಿರಿಯರು ಹೆಚ್ಚೆಂದರೆ ೭ನೇ ತರಗತಿ ವ್ಯಾಸಂಗ ಮುಗಿಸಿ ವ್ಯಾಪಾರವನ್ನು ಆರಂಭಿಸಿ ತಾವು ಜೀವನಕಟ್ಟಿಕೊಂಡು, ೬-೭ ಮಂದಿಗೆ ಉದ್ಯೋಗ ನೀಡುತ್ತಿದ್ದರು, ಆದರೆ ಇಂದು ಅನೇಕರು ವ್ಯಾಪಾರದಿಂದ ವಿಮುಖರಾಗುತ್ತಿದ್ದಾರೆ ಎಂದು ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ್ ವಿಷಾಧಿಸಿದರು.
ಜಿಲ್ಲೆಯ ಚನ್ನಪಟ್ಟಣದ ಎಂ.ಜಿ.ರಸ್ತೆಯಲ್ಲಿರುವ ವಾಸವಿ ಮಹಲ್‌ನಲ್ಲಿ ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ನಮ್ಮ ಯುವ ಸಮುದಾಯ ಎಂ.ಬಿ.ಎ ಮುಂತಾದ ಉನ್ನತ ಪದವಿಗಳನ್ನು ಪಡೆದು ಉದ್ಯೋಗ ಅರಿಸಿ ಹೋಗುತ್ತಿದ್ದಾರೆ. ಇಂದು ಶಿಕ್ಷಣ ಪಡೆಯುವುದು ಉದ್ಯೋಗ ಪಡೆಯುವುದಕ್ಕಾಗಿ ಎನ್ನುವಂತಾಗಿದೆ. ಅನೇಕರು ಸಾಂಪ್ರದಾಯಿಕ ವ್ಯಾಪಾರದಿಂದ ವಿಮುಖರಾಗುತ್ತಿದ್ದಾರೆ. ಆರ್ಯವೈಶ್ಯರು ವ್ಯಾಪಾರದ ಮೂಲಕವೇ ಜೀವನ ಕಟ್ಟಿಕೊಂಡಿರುವ ಸಮುದಾಯ ಹೀಗಾಗಿ ನೂತನವಾಗಿ ಅವಿಷ್ಕಾರವಾಗುತ್ತಿರುವ ತಾಂತ್ರಿಕತೆಯ ಮೂಲಕ ವ್ಯಾಪಾರ, ವಹಿವಾಟುಗಳನ್ನು ವೃದ್ದಿಸುವ ಅವಕಾಶ ಮತ್ತು ಸಾಧ್ಯತೆಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.

ಸಂಘಟನೆಯೇ ಬಲ!
ರಾಜ್ಯದಲ್ಲಿ ಆರ್ಯ ವೈಶ್ಯರ ೧೮೪೭ ಸಂಘಟನೆಗಳಿವೆ, ಈ ಸಂಘಟನೆಗಳ ಬಲವೃದ್ದಿಗೆ ಸಂಕಲ್ಪಿಸಿ ಎಂದು ಅವರು ಕರೆ ನೀಡಿದರು. ಸದಸ್ಯರೆಲ್ಲರ ಭಾವನೆಗಳು ಒಟ್ಟಾಗಿ ಸೇರಿದರೆ ಸಮುದಾಯದ ಸಂಘಟನೆಗಳು ಅರ್ಥ ಪೂರ್ಣವಾಗಿರುತ್ತದೆ ಎಂದರು.
ದಿನ ಕಳದಂತೆ ಸಮುದಾಯದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆಯಾ ಭಾಗದ ಸಂಘಟನೆಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ ಎಂದು ಸಂಘಟನೆಗಳ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು. ಸಂಘಟನೆಗಳು ಕೇವಲ ಧಾರ್ಮಿಕತೆಗೆ ಮಾತ್ರ ಸೀಮಿತವಾಗದಿರಲಿ ಎಂದರು.
ಹಬ್ಬಗಳ ಆದರ್ಶಗಳನ್ನು ಅರಿಯಿರಿ
ಹಬ್ಬದ ಆಚರಣೆಗಳು ಅದ್ದೂರಿಯಾಗುತ್ತಿವೆ ಆದರೆ ಅವುಗಳ ಆದರ್ಶಗಳನ್ನು ಮರೆಯುತ್ತಿದ್ದೇವೆ. ಹಬ್ಬ ಏಕೆ, ಹೇಗೆ ಆಚರಿಸಬೇಕು ಎಂಬ ಆದರ್ಶಗಳ ಪಾಲನೆಯಾಗುತ್ತಿಲ್ಲ, ಆಲೋಚನೆಗಳಿಗೆ ಬಡತನ ಬರಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಆಚಾರಗಳು, ಪರಂಪರೆಗಳನ್ನು ಪಾಲಿಸಿ ಎಂದು ಕರೆ ನೀಡಿದ ಅವರು ನಮ್ಮ ಕಲ್ಪನೆಗಳು ಅಸ್ತಿತ್ವದಲ್ಲಿರಬೇಕು, ಆಸ್ತಿಯ ಮೇಲಲ್ಲ ಎಂದ ಅವರು ಮಾನವನ ಆಲೋಚನೆಗಳು ಹೇಗಿರಬೇಕು ಎಂಬುದರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮಕ್ಕಳನ್ನು ಶ್ರೀಮಂತರನ್ನಾಗಿ ಬೆಳೆಸುವದಕ್ಕಿಂತ ಹೃದಯ ಶ್ರೀಮಂತಿಕೆಯಿಂದ ಬೆಳೆಸಿ ಎಂದು ಸಮುದಾಯದ ನಾಗರೀಕರಿಗೆ ಸಲಹೆ ಕೊಟ್ಟರು.
ಜನಸಂಖ್ಯೆ ಕಡಿಮೆ, ಸಾಧನೆ ಅಧಿಕ!
ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರು ವಿಶ್ವರೂಪ ದರ್ಶನ ನೀಡಿದ ಏಕೈಕ ದೇವತೆ. ಈ ಮಾತೆ ಆರ್ಯವೈಶ್ಯರ ಕುಲದೇವತೆ. ಸಮುದ್ರದಲ್ಲಿನ ಸಣ್ಣ ಮೀನಿನಂತೆ ಸಮಾಜದಲ್ಲಿ ಆರ್ಯವೈಶ್ಯರಿದ್ದಾರೆ. ಆದರೆ ಕರ್ನಾಟಕದಲ್ಲಿ ಆರ್ಯ ವೈಶ್ಯ ಸಮುದಾಯದವರು ೩೦೧ ದೇವಾಲಗಳನ್ನು ನಿರ್ಮಿಸಿದ್ದಾರೆ, ೧೫೭ ಕಲ್ಯಾಣ ಮಂಟಪಗಳನ್ನು ನಿರ್ವಹಿಸುತ್ತಿದ್ದಾರೆ. ೧೦೨ ಖಾಸಗಿ ಶಾಲೆಗಳಲ್ಲಿ ೪೮ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ. ಸಹಾಕರ ಸಂಘಗಳು ೧.೫ ಲಕ್ಷ ಕೋಟಿ ವಹಿವಾಟು ನಡೆಸುತ್ತಿವೆ ಎಂದು ಆರ್ಯ ವೈಶ್ಯ ಸಮುದಾಯದ ಸಾಧನೆಯನ್ನು ವಿವರಿಸಿದರು. ಕೋವಿಡ್ ಸಂದರ್ಭದ ಕಠೀಣ ದಿನಗಳಲ್ಲಿ ರಾಜ್ಯಾದ್ಯಂತ ೫೬ ರಕ್ತ ಸಂಗ್ರಹಣಾ ಶಿಬಿರಗಳನ್ನು ಆಯೋಜಿಸಿ ರಕ್ತ ಸಂಗ್ರಹಿಸಿ ಕೊಟ್ಟ ಕೀರ್ತಿಗೆ ಆರ್ಯ ವೈಶ್ಯ ಸಂಘಟನೆಗಳು ಪಾತ್ರರಾಗಿದ್ದಾರೆ ಎಂದರು.
ವಾಸವಿ ಬ್ಯಾಂಕ್ ಸ್ಥಾಪನೆ
ಸಧ್ಯ ಕರ್ನಾಟಕ ಆರ್ಯ ವೈಶ್ಯ ಮಹಸಾಭಾದವತಿಯಿಂದ ಶಾಲೆ ಮತ್ತು ಕಾಲೇಜು ಸ್ಥಾಪನೆಗೆ ಮುಂದಾಗಿದೆ. ಅತಿಶೀಘ್ರದಲ್ಲಿ ವಾಸವಿ ಬ್ಯಾಂಕ್ ಸ್ಥಾಪಿಸುವ ಉದ್ದೇಶವನ್ನು ರಾಜ್ಯಾಧ್ಯಕ್ಷರು ಪ್ರಕಟಿಸಿದರು.
ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ಬಾಲಾಜಿ ಸಮಾವೇಶದ ಅಧ್ಯಕ್ಷತೆವಹಿಸಿ ಎಲ್ಲರನ್ನು ಸ್ವಾಗತಿಸಿದರು. ಮಹಾಸಭಾದ ಸಂಘಟನಾ ಕಾರ್ಯದರ್ಶಿ ಎ.ಆರ್.ರವಿಕುಮಾರ್, ವಿಭಾಗೀಯ ಕಾರ್ಯದರ್ಶಿ ಹಾಗೂ ಜಿಲ್ಲಾ ಪ್ರತಿನಿಧಿ ಕೆ.ವಿ.ಪ್ರಸನ್ನಕುಮಾರ್ ಮಾತನಾಡಿದರು. ಮಹಸಾಭಾದ ಮತ್ತೊಮ್ಮ ಜಿಲ್ಲಾ ಪ್ರತಿನಿಧಿ ಬಿ.ಎಸ್.ಗೋಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರಾಮನಾಥ್ ಅವರನ್ನು ಗೌರವಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಾತಾಜಿ ವಿವೇಕಮಯಿ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು. ರಾಮನಗರ, ಮಾಗಡಿ ಮತ್ತು ಕನಕಪುರ ತಾಲೂಕುಗಳಿಂದ ಆರ್ಯ ವೈಶ್ಯ ಸಮುದಾಯದ ಸದಸ್ಯರು ಭಾಗವಹಿಸಿದ್ದರು.
