ನಿರಾಳವಾಗಿದ್ದ ರಾಮನಗರ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಪಾಸಿಟಿವ್ ಪ್ರಕರಣ

ರಾಮನಗರ, ಮೇ 25,2020: ಕೋವಿಡ್ 19 ಸೋಂಕಿನಿಂದ ನಿರಾಳವಾಗಿದ್ದ ರಾಮನಗರ ಜಿಲ್ಲೆಯಲ್ಲೀಗ ಎರಡು ವರ್ಷದ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡು ಸೋಂಕಿತ ಜಿಲ್ಲೆಗಳ ಪಟ್ಟಿಗೆ ಎಂಟ್ರಿ ಕೊಟ್ಟಿದೆ. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೋಲಿಸ್ ಪೇದೆ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರಲ್ಲೂ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಬಗ್ಗೆ ಆತಂಕ ಹೆಚ್ಚಾಗಿದೆ.

ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಹೋಬಳಿ ಮಾರಸಂದ್ರ ನಿವಾಸಿ ಮಗುವೊಂದಕ್ಕೆ (ಪಿ – 2134) ಕೋವಿಡ್ 19 ಸೋಂಕು ಕಾಣಿಸಿಕೊಂಡಿದ್ದು ಸಧ್ಯ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ ಪಡೆದುಕೊಳ್ಳುತ್ತಿದೆ. ಮಗು ಮತ್ತು ಕುಟುಂಬದ ಸದಸ್ಯರಲ್ಲಿ  ಆರೋಗ್ಯ ಸ್ಥಿರವಾಗಿದೆ ಎಂದು ಗೊತ್ತಾಗಿದೆ.

ಮಗು ಮತ್ತು ಕುಟುಂಬ ಇತ್ತೀಚೆಗೆ ತಮಿಳುನಾಡಿನಿಂದ ಎರಡುವಾರಗಳ ಹಿಂದಿರುಗಿದ್ದಾರೆ. ಈ ಕುಟುಂಬದ ಗಂಟಲು ದ್ರವವನ್ನು ಸೋಂಕಿನ ಪರೀಕ್ಷೆಗೆ ಕಳುಹಿಸಲಾಗಿತ್ತು. ಫಲಿತಾಂಶ ನೆಗೆಟಿವ್ ಬಂದಿತ್ತು. ಹೋಂ ಕ್ವಾರಂಟೈನ್‌ನಲ್ಲಿದ್ದ  ಇವರಿಗೆ ಮರು ಪರೀಕ್ಷೆ ಮಾಡಿದಾಗ ಮಗುವಿನಲ್ಲಿ ಸೋಂಕು ಇರುವುದು ಸೋಮವಾರ ಪತ್ತೆಯಾಗಿದೆ, ಆದರೆ ಮಗುವಿನ ಪೋಷಕರಲ್ಲಿ ಎರಡನೇ ಬಾರಿಗೂ ನೆಗೆಟಿವ್ ಲಿತಾಂಶ ಬಂದಿದೆ. ಸೋಂಕು ಇರುವುದು ಗೊತ್ತಾದ ತಕ್ಷಣವೇ ಮಗುವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಮಾರಸಂದ್ರ ಗ್ರಾಮವನ್ನು ಕಂಟೈನ್‌ಮೆಂಟ್ ಜೋನ್ ಎಂದು ಜಿಲ್ಲಾಡಳಿತ ಘೋಷಿಸಿದೆ. ಮಗುವಿನ ಸಂಪರ್ಕ ಪಡೆದಿದ್ದ ಇತರ ಗ್ರಾಮಸ್ಥರ ಗಂಟಲು ದ್ರವ ಪರೀಕ್ಷೆಗೂ ಆರೋಗ್ಯ ಅಧಿಕಾರಿಗಳು ಮುಂದಾಗಿದ್ದಾರೆ.