* ದಶಪಥ ಗುತ್ತಿಗೆದಾರ ಕಂಪನಿಯೂ ನಷ್ಟ ಭರಿಸಬೇಕು
ರಾಮನಗರ: 4ನೇ ಸೆಪ್ಟಂಬರ್ 2022: ಸೀರಹಳ್ಳದಲ್ಲಿನ ಪ್ರವಾಹದಿಂದಾಗಿ ಹಾನಿಯಾಗಿರುವ ಕುಟುಂಬಗಳಿಗೆ ತಕ್ಷಣಕ್ಕೆ ಕನಿಷ್ಠ 1 ಲಕ್ಷ ರೂ ಪರಿಹಾರವನ್ನು ಸರ್ಕಾರ ಬಿಡುಗಡೆ ಮಾಡಬೇಕು, ಸರ್ಕಾರ ನೀಡುತ್ತಿರುವ 10 ಸಾವಿರ ರೂ ಏನಕ್ಕೂ ಸಾಲುವುದಿಲ್ಲ ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಒತ್ತಾಯಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಟಿಪ್ಪುನಗರ, ಅರ್ಕೇಶ್ವರ ಕಾಲೋನಿ, ಟ್ರೂಪ್ ಲೇನ್ ಮುಂತಾದ ನೆರೆಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟು ಸಂತ್ರಸ್ತರ ಅಹವಾಲು ಆಲಿಸುವ ಸಲುವಾಗಿ ಅವರು ನಗರಕ್ಕೆ ಆಗಮಿಸಿದ್ದರು. ಹೆದ್ದಾರಿ ಎನ್.ಎಚ್.275ರ ಕಳಪೆ ಕಾಮಗಾರಿಯಿಂದಾಗಿ ಅಪಾರ ಪ್ರಮಾಣದ ನೀರು ನಗರಕ್ಕೆ ನುಗ್ಗಿದೆ. ಹೀಗಾಗಿ ಇಲ್ಲಿ ನಷ್ಟವಾಗಿದೆ. ಸುಮಾರು ಮೂರು ಸಾವಿರ ಮನೆಗಳು, ರೇಷ್ಮೆ ನೂಲು ಘಟಕಗಳಿಗೆ ಹಾನಿಯಾಗಿದೆ ಎಂದರು.
ಹೆದ್ದಾರಿ ಗುತ್ತಿಗೆದಾರ ನಷ್ಟ ಭರಿಸಲಿ
ನಗರದಲ್ಲಿ ನೆರೆ ಉಂಟಾಗಿ ಆಗಿರುವ ನಷ್ಟಕ್ಕೆ ಕಳಪೆ ಕಾಮಗಾರಿಯೇ ಕಾರಣ. ಹೆದ್ದಾರಿ ನಿರ್ಮಾಣ ಮಾಡಿರುವ ಕಾಂಟ್ರಾಕ್ಟ್ ಸಂಸ್ಥೆಯೂ ನಷ್ಟ ಭರಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ, ಕಾಂಗ್ರೆಸ್ ಅವರನ್ನು ನಾವು ಬಯ್ಯುವುದು, ಅವರು ನಮ್ಮನ್ನು ಬಯ್ಯುವ ಸಮಯವಿದಲ್ಲ. ಈ ಕ್ಷಣಕ್ಕೆ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಬೇಕಾಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕಾಗಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಈ ವಿಚಾರದಲ್ಲಿ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅವರ ಜೊತೆ ಕೈ ಜೋಡಿಸಬೇಕು ಎಂದರು.
ನೆರೆ ಹಾನಿಗೊಳಗಾಗಿರುವ ಕುಟುಂಬಗಳಿಗೆ ಭಯ ಬೇಡ. ಇದು ತತ್ಕಾಲಿಕ ಕಷ್ಟ. 2023ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ನಷ್ಟವಾಗಿರುವ ಪ್ರತಿಯೊಬ್ಬರಿಗೂ ಮನೆ ಕಟ್ಟಿ ಕೊಡುವ ನಿರ್ಧಾರವನ್ನು ಜೆಡಿಎಸ್ ಮಾಡಿದೆ ಎಂದರು.
ಶೇ 40 ಕಮಿಷನ್ ನಿಜ ಅನಿಸುತ್ತೆ!
ಹೆದ್ದಾರಿಯದ್ದು ಕಳಪೆ ಕಾಮಗಾರಿ ಎಂದು ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ಮೂರನೇ ವ್ಯಕ್ತಿಯಿಂದ ತನಿಖೆ ಮಾಡಿಸುವಂತೆ ಸಲಹೆ ಕೊಟ್ಟಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಿ.ಎಂ.ಇಬ್ರಾಹಿಂ, ಹೆದ್ದಾರಿ ಕಂಟ್ರಾಕ್ಟರ್ ಅವರ (ಪ್ರತಾಪ್ ಸಿಂಹ) ಚಿಕ್ಕಪ್ಪನಾ? ಕಾಮಗಾರಿ ಸರಿಯಾಗಿದ್ದರೆ, ನೀರೇಕೆ ನಿಂತಿತ್ತು? ಮುಖ್ಯ ಮಂತ್ರಿಗಳೇ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಪ್ರತಾಪ್ ಸಿಂಹ ಕಂಟ್ರಾಕ್ಟರ್ ಪರ ಮಾತನಾಡುತ್ತಿರುವುದು ಅನುಮಾನಕ್ಕೆ ಕಾರಣವಾಗುತ್ತಿದೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸುತ್ತಿರುವಂತೆ ಈ ಕಾಮಗಾರಿಯಲ್ಲೂ ಶೇ 40 ಕಮೀಷನ್ ದೂರು ಸತ್ಯ ಎನಿಸುತ್ತೆ ಎಂದು ಬಾಂಬ್ ಸಿಡಿಸಿದರು.
ಹೆದ್ದಾರಿ ಕಾಮಗಾರಿಯನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮಾಗಡಿ ಕ್ಷೇತ್ರದ ಶಾಸಕ ಎ.ಮಂಜು ಅವರ ಆಗ್ರಹ ಸರಿಯಾಗಿದೆ ಎಂದರು.
ಹೆದ್ದಾರಿ ಕಳಪೆ ಕಾಮಗಾರಿ ವಿಚಾರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನಿಯೋಗ ದೆಹಲಿಗೆ ತೆರಳುತ್ತಿದ್ದೇವೆ. ದೂರು ಎನ್ನುವುದಕ್ಕಿಂತ ಹೆದ್ದಾರಿ ಕಳಪೆ ಕಾಮಗಾರಿಯನ್ನು ಸರಿಪಡಿಸುವಂತೆ ಒತ್ತಾಯಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಜೆಡಿಎಸ್ ಪ್ರಮುಖರಾದ ರಾಜಶೇಖರ್, ಬಿ.ಉಮೇಶ್, ಸುಹೇಲ್ ಪಾಷ, ಸಹೇಲ್, ಮುನಜಿಲ್ ಆಗ, ಮೊಹಬಾಬು ಖಾನ್, ಅಕ್ಕಿ ಫೈರೋಜ್, ಗೇಬ್ರಿಯಲ್ ಮುಂತಾದವರು ಇದ್ದರು.
