ಬಸ್ ಟಿಕೆಟ್ ರದ್ದು: ಖಾಸಗಿ ಟ್ರಾವೆಲ್ಸ್ ಸಂಸ್ಥೆಗೆ 10 ಸಾವಿರ ದಂಡ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶ

ರಾಮನಗರ: 6/11/25: ವೈಕುಂಠ ಏಕಾದಶಿಯಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವುದಕ್ಕಾಗಿ ಬುಕ್ಕಿಂಗ್ ಮಾಡಿದ್ದ ಮೂರು ಬಸ್ ಟಿಕೆಟ್‌ಗಳನ್ನು ಏಕಾಏಕಿ ರದ್ದುಪಡಿಸಿ, ಭಕ್ತರೊಬ್ಬರ ಧಾರ್ಮಿಕ ಹಕ್ಕು ಉಲ್ಲಂಘಿಸಿದಕ್ಕಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ಗ್ರೀನ್‌ಲೈನ್ ಟ್ರಾವೆಲ್ ಮತ್ತು ಹಾಲಿಡೇಸ್ ಸಂಸ್ಥೆಗೆ 10 ಸಾವಿರ ದಂಡ ವಿಧಿಸಿದೆ.

ದೂರುದಾರರಾದ ವಿವೇಕಾನಂದನಗರದ ಚಂದ್ರಮೋಹನ್ ಜೆ. ಅವರು ವೈಕುಂಠ ಏಕಾದಶಿಯಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತಮ್ಮಿಬ್ಬರು ಸ್ನೇಹಿತರೊಂದಿಗೆ ಜ. 2ರಂದು ತೆರಳಲು ನಿರ್ಧರಿಸಿದ್ದರು. ಅದಕ್ಕಾಗಿ ಗ್ರೀನ್‌ಲೈನ್ ಸಂಸ್ಥೆಯ ಹವಾನಿಯಂತ್ರಿತ ಸ್ಲೀಪರ್ ಬಸ್‌ಗೆ 3 ಟಿಕೆಟ್‌ಗಳನ್ನು ಒಂದು ತಿಂಗಳು ಮುಂಚೆಯೇ ಬಸ್ ಟಿಕೆಟ್ ಮಾಡಿದ್ದರು. ತಿರುಪತಿಗೆ ತೆರಳಲು ನಾಲ್ಕು ದಿನ ಇರುವಾಗ ಟಿಕೆಟ್ ರದ್ದಾಗಿದೆ ಎಂದು ಟ್ರಾವೆಲ್ಸ್ ಸಂಸ್ಥೆಯು ಚಂದ್ರಮೋಹನ್ ಅವರ ಮೊಬೈಲ್‌ಗೆ ಸಂದೇಶ ಕಳಿಸಿತ್ತು. ತಿರುಪತಿಯಲ್ಲಿ ದರ್ಶನ ರದ್ದಾಗಿದೆ. ಹಾಗಾಗಿ, ತಮ್ಮ ಬುಕ್ಕಿಂಗ್ ಮೊತ್ತ ಹಿಂದಿರುಗಿಸುವುದಾಗಿ ಸಂಸ್ಥೆ ಹೇಳಿತ್ತು.

ದೇವರ ದರ್ಶನ ರದ್ದು ಎಂಬುದು ಸುಳ್ಳು:

ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಮಾಡದ ಸಂಸ್ಥೆಯು, ದೇವರ ದರ್ಶನದ ಆಸೆಗೆ ತಣ್ಣೀರು ಎರಚಿದೆ. ವೈಕುಂಠ ಏಕಾದಶಿಯಂದು ದರ್ಶನ ಮಾಡಲು ಒಂದು ವರ್ಷ ಕಾಯಬೇಕು. ಸಂಸ್ಥೆಯಿಂದಾಗಿ ತಮ್ಮ ಧಾರ್ಮಿಕ ಹಕ್ಕು ಉಲ್ಲಂಘನೆ ಜೊತೆಗೆ ಮಾನಸಿಕವಾಗಿ ನೋವಾಗಿದೆ. ಪ್ರಯಾಣಕ್ಕೆ ಬೇಡಿಕೆ ಹೆಚ್ಚಾಗಿದ್ದರಿಂದ ಟಿಕೆಟ್ ದರ ಏರಿಸಿಕೊಳ್ಳುವುದಕ್ಕಾಗಿ, ಸಂಸ್ಥೆಯು ದೇವರ ದರ್ಶನ ರದ್ದಾಗಿದೆ ಎಂದು ಸುಳ್ಳು ಹೇಳಿದೆ ಎಂದು ಚಂದ್ರಮೋಹನ್ ದೂರಿದ್ದರು. ಸಂಸ್ಥೆ ಹಿಂದೆಯೂ ಇದೇ ರೀತಿ ನಡೆದುಕೊಂಡಿದೆ. ಈಗಲೂ ಉದ್ದೇಶ. ಪೂರ್ವಕವಾಗಿಯೇ ಟಿಕೆಟ್ ರದ್ದಾಗಿದೆ ಎಂದು ಹೇಳುವ ಮೂಲಕ ನಮಗೆ ಮಾನಸಿಕವಾಗಿ ನೋವುಂಟು ಮಾಡಿ, ಸೇವಾ ನ್ಯೂನ್ಯತೆ ಎಸಗಿದೆ. ಇದಕ್ಕೆ ರೂ. 30 ಲಕ್ಷ ಪರಿಹಾರ ನೀಡಬೇಕು ಎಂದು ಚಂದ್ರಮೋಹನ್ ಅವರು ಆಯೋಗಕ್ಕೆ ಮಾರ್ಚ್ 4ರಂದು ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ಆಯೋಗವು ಟ್ರಾವೆಲ್ಸ್ ಸಂಸ್ಥೆಗೆ ಮಾರ್ಚ್ 13ರಂದು ನೋಟೀಸ್ ಜಾರಿಗೊಳಿಸಿತ್ತು.

ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷೆ ರೇಣುಕಾದೇವಿ ದೇಶಪಾಂಡೆ ಮತ್ತು ಮಹಿಳಾ ಸದಸ್ಯೆ ಲತಾ ಎಂ.ಎಸ್ ಅವರು, ಎರಡೂ ಕಡೆಯವರ ವಾದವನ್ನು ಆಲಿಸಿ, ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ್ದರು. ಟ್ರಾವೆಲ್ಸ್ ಸಂಸ್ಥೆಯುವರು ಹೇಳಿದಂತೆ ತಿರುಪತಿಯಲ್ಲಿ ದರ್ಶನ ರದ್ದಾಗಿರುವುದಕ್ಕೆ ಸೂಕ್ತ ದಾಖಲೆಗಳು ಇರಲಿಲ್ಲ. ಗ್ರಾಹಕ ಸಂರಕ್ಷಣಾ ಕಾಯ್ದೆ-2019 ಕಲಂ-35ರ ಅನ್ವಯ ಅರ್ಜಿದಾರ ಮನವಿಯನ್ನು ಭಾಗಶಃ ಪುರಸ್ಕರಿಸಿದ್ದರು. ದೂರುದಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದ ಸಂಸ್ಥೆಯು ಮಾನಸಿಕ ಹಿಂಸೆಯಾಗುವಂತೆ ಮಾಡಿ, ಧಾರ್ಮಿಕ ಹಕ್ಕಿನ ಉಲ್ಲಂಘನೆ ಮಾಡಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಗ್ರಾಹಕರಿಗೆ ರೂ. 10 ಸಾವಿರ ಪರಿಹಾರ ಮತ್ತು ನ್ಯಾಯಾಲಯದ ಖರ್ಚು ರೂ. 2 ಸಾವಿರ ಸೇರಿದಂತೆ ಒಟ್ಟು ರೂ. 12 ಸಾವಿರವನ್ನು ದೂರು ದಾಖಲಿಸಿದ ದಿನಾಂಕದಿಂದ 45 ದಿನದೊಳಗೆ ಶೇ.6ರಷ್ಟು ಬಡ್ಡಿಯೊಂದಿಗೆ ದೂರುದಾರ ಚಂದ್ರಮೋಹನ ಅವರಿಗೆ ಪಾವತಿಸಬೇಕು. ತಪ್ಪಿದ್ದಲ್ಲಿ ವಾರ್ಷಿಕ ಶೇ. 8ರಷ್ಟು ಬಡ್ಡಿಯಂತೆ ಮರು ಪಾವತಿಸಬೇಕು ಎಂದು ಕಳೆದ ಅಕ್ಟೋಬರ್ 31 ರಂದು ಆದೇಶ ನೀಡಿದರು.
ಪ್ರಕರಣದ ವಿಚಾರಣೆ 7 ತಿಂಗಳು 27 ದಿನ ನಡೆಯಿತು ದೂರುದಾರ ಚಂದ್ರಮೋಹನ ಪರವಾಗಿ ವಕೀಲ ಶ್ರೀಧರ ಎಚ್.ಡಿ. ಮತ್ತು ಗ್ರೀನ್ ಲೈನ್ ಟ್ರಾವೆಲ್ಸ್ ಸಂಸ್ಥೆ ಪರವಾಗಿ ವಕೀಲ ಆರ್. ಹೊಂಬೇಗೌಡ ಅವರು ವಾದ ಮಂಡಿಸಿದ್ದರು ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷೆ ರೇಣುಕಾದೇವಿ ದೇಶಪಾಂಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ