“ಬಿ” ಖಾತೆಗಳ ಬಗ್ಗೆ ಸಧ್ಯದಲ್ಲೇ ನಿರ್ಧಾರ  – ನಗರಸಭಾಧ್ಯಕ್ಷ ಕೆ.ಶೇಷಾದ್ರಿ

* ಕಾಲಾವಧಿಯಂತೆ ಇ-ಖಾತೆಗಳ ವಿತರಣೆಯಾಗುತ್ತಿದೆ

ರಾಮನಗರ: 15 February 2025: ಸರ್ಕಾರ “ಬಿ” ಖಾತೆಗಳನ್ನು ವಿತರಿಸುವ ವಿಷಯದಲ್ಲಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ತಾವು, ಸದಸ್ಯರು ಮತ್ತು ಅಧಿಕಾರಿಗಳು ಚರ್ಚೆ ನಡೆಸಿ ನಾಗರೀಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.

ನಾಲ್ಕನೇ ಹಂತದಲ್ಲಿ 60ಕ್ಕೂ ಹೆಚ್ಚು ಇ-ಖಾತಾ ಪ್ರಮಾಣ ಪತ್ರಗಳನ್ನು ಶನಿವಾರ ನಗರಸಭಾಧ್ಯಕ್ಷ ಕೆ.ಶೇಷಾದ್ರಿ, ನಗರಸಭಾ ಸದಸ್ಯರು ಮತ್ತು ಅಧಿಕಾರಿಗಳು ವಿತರಿಸಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ತಾವು ಅಧಿಕಾರ ವಹಿಸಿಕೊಂಡ ನಂತರ ಇದುವರೆಗೆ ಸುಮಾರು 500ಕ್ಕೂ ಹೆಚ್ಚು ಇ-ಖಾತೆಗಳನ್ನು ವಿತರಿಸಲಾಗಿದೆ ಎಂದರು. ಇ-ಖಾತೆಗಳ ನವೀಕರಣ, ಪೌತಿ ಖಾತೆ, ಹೊಸ ಇ-ಖಾತೆಗಳಿಗೆ ಸಂಬಂಧಿಸಿದಂತೆ ರಜಾ ದಿನಗಳನ್ನು ಹೊರತುಪಡಿಸಿ ನಿಗಧಿತ ಕಾಲಾವಧಿಯನ್ನು ಅಳವಡಿಸಿಕೊಂಡಿದ್ದೇವೆ. ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಕಾಲಾವಧಿಯಲ್ಲಿ ಇ-ಖಾತೆಗಳ ವಿತರಣೆಗೆ ಶ್ರಮಿಸುತ್ತಿದ್ದಾರೆ. ಸರ್ವರ್ ಸಮಸ್ಯೆ ಇತ್ಯಾದಿ ತಾಂತ್ರಿಕ ಸಮಸ್ಯೆಗಳಿಂದ ಕೆಲವೊಮ್ಮೆ ವಿಳಂಬವಾಗಬಹುದುಷ್ಟೆ, ಇ-ಖಾತೆಗಳ ವಿಚಾರದಲ್ಲಿ ಆಸ್ತಿ ಮಾಲೀಕರು ನೇರವಾಗಿ ಅಧಿಕಾರಿಗಳು, ಪೌರಾಯುಕ್ತರು ಅಥವಾ ತಮ್ಮನ್ನು ಸಂಪರ್ಕಿಸಿದರೆ ಸಹಕಾರ ದೊರೆಯುತ್ತದೆ ಎಂದರು.

ಇ-ಖಾತೆ ಆಸ್ತಿ ಮಾಲೀಕರ ಹಕ್ಕು, ನಗರಸಭೆ ಉಪಕಾರ ಮಾಡುತ್ತಿಲ್ಲ. ಚುನಾುತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ವಂತ ಸ್ವತ್ತಿಗೆ ಮಧ್ಯವರ್ತಿಗಳು, ದಲ್ಲಾಳಿಗಳ ಅವಲಂಭನೆ ಬೇಡ ಎಂದರು.

ನಗರದ 31 ವಾರ್ಡುಗಳಲ್ಲಿ 24*7 ಕುಡಿಯುವ ನೀರಿನ ವ್ಯವಸ್ಥೆ ಜಾರಿಯಾಗಿದೆ. ಆದರೆ ಕೆಲವೆಡೆ ನ್ಯೂನತೆಗಳು, ಸಮಸ್ಯೆಗಳು ಕಂಡು ಬಂದಿವೆ. ಇವೆಲ್ಲದರ ಪರಿಶೀಲನೆಗೆ ನಗರಸಭಾ ಸದಸ್ಯರ ಸಮಿತಿ ರಚನೆಯಾಗಿದೆ. ಎಲ್ಲಾ 31 ವಾರ್ಡುಗಳಿಗೂ ಭೇಟಿ ನೀಡುವ ಈ ಸಮಿತಿ, ನ್ಯೂನತೆಗಳನ್ನು, ಸಮಸ್ಯೆಗಳ ಮಾ”ತಿ ಸಂಗ್ರಹಿಸುವರು. ತದ ನಂತರ ಇವುಗಳ ಪರಿಹಾರಕ್ಕೆ ಹಂತ ಹಂತದ ಕಾರ್ಯಕ್ರಮ ಕೈಗೊಳ್ಳಲಗುವುದು ಎಂದರು.

ಸಧ್ಯ ರಾಮನಗರ ನಗರ ವ್ಯಾಪ್ತಿಯಲ್ಲಿ 87 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ, ಒಟ್ಟಾರೆ ಪರಿಸರ ಸ್ನೇಹಿ ರಾಮನಗರಕ್ಕೆ ತಾವು, ಸದಸ್ಯರು ಮತ್ತು ಅಧಿಕಾರಿಗಳು ಬದ್ದ ಎಂದರು.

“ಬಿ” ಖಾತೆಗಳಿಗೆ ಅರ್ಜಿ ಆಹ್ವಾನ – ಆಯುಕ್ತರು

ನಗರಸಭೆಯ ಆಯುಕ್ತ ಡಾ.ಜಯಣ್ಣ ಮಾತನಾಡಿ, ಹಲವಾರು ಆಸ್ತಿಗಳಿಗೆ “ಎ” ಖಾತೆ ಮಾಡಿಕೊಡಲು ಕಾನೂನು ತೊಡಕಿದ್ದವು. ಈ ವಿಚಾರದಲ್ಲಿ ಸರ್ಕಾರ ಈಗ ಆದೇಶ ಹೊರೆಡಿಸಿದ್ದು, “ಬಿ” ಖಾತೆ ಮಾಡಿಕೊಡಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. “ಬಿ” ಖಾತೆಗಳು “ಎ” ಖಾತೆಗಳಿಗೆ ಸಮಾನಂತರ ಖಾತೆಗಳಾಗಿವೆ. “ಬಿ” ಖಾತೆಗಳ ಮಾರ್ಗಸೂಚಿಗಳನ್ನು ಇಡೀ ರಾಜ್ಯ ನಿರೀಕ್ಷಿಸಿತ್ತು. ಇದೀಗ ಬಿಡುಗಡೆಯಾಗಿರುವ ಮಾರ್ಗಸೂಚಿಗಳ ಬಗ್ಗೆ ನಗರಸಭೆಯ ಸದಸ್ಯರು ಮತ್ತು ಅಧಿಕಾರಿಗಳು ಚರ್ಚೆ ನಡೆಸಿ ನಾಗರೀಕರಿಂದ “ಬಿ” ಖಾತೆಗಳಿಗೆ ಅರ್ಜಿ ಸ್ವೀಕರಿಸುವುದಾಗಿ ತಿಳಿಸಿದರು.

ಈ ವೇಳೆ ನಗರಸಭೆಯ ಉಪಾಧ್ಯಕ್ಷರಾದ ಆಯೆಷಾ ಖಾನಂ, ಆಯುಕ್ತ ಡಾ.ಜಯಣ್ಣ, ಸದಸ್ಯರುಗಳಾದ ಫೈರೋಜ್ ಪಾಷ, ಅಜ್ಮತ್, ಸಮದ್, ಅಧಿಕಾರಿಗಳಾದ ರೇಖಾ, ಕಿರಣ್, ವೇದವತಿ ಮುಂತಾದವರು ಹಾಜರಿದ್ದರು.

…………….