ಮುಜರಾಯಿ ಇಲಾಖೆಯ ‘ಎ ವರ್ಗದ’ ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ಜಿಲ್ಲಾಡಳಿತ ತತ್ಕಾಲಿಕ ತಡೆ

ರಾಮನಗರ, ಜೂನ್‍ 8: ಭಕ್ತಾದಿಗಳ  ಆರೋಗ್ಯದ  ಹಿತದೃಷ್ಠಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಕೋವಿಡ್ 19 ಹರಡುವುದನ್ನು ತಡೆಯುವ ಕುರಿತು ಮುಂಜಾಗ್ರತಾ ಕ್ರಮವಾಗಿ  ಜಿಲ್ಲೆಯಲ್ಲಿ  ಮುಜರಾಯಿ ಇಲಾಖೆಗೆ ಸೇರಿದ  ಏಳು “ಎ” ವರ್ಗದ ದೇವಾಲಯಗಳಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ದೇವರ ದರ್ಶನ ಕಲ್ಪಿಸುವುದುನ್ನು ತತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ನಿಷೇಧಿಸಿ ಜಿಲ್ಲಧಿಕಾರಿಗಳು ಆದೇಶ ಹೊರೆಡಿಸಿದ್ದಾರೆ.

ಜಿಲ್ಲಾಧಿಕಾರಿ, ಜಿಲ್ಲಾ ದಂಡಾಧಿಕಾರಿ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144 ರಡಿ ಈ ಆದೇಶ ಹೊರೆಡಿಸಿರುವುದಾಗಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದ್ದಾರೆ.

ಎ ವರ್ಗಕ್ಕೆ ಸೇರಿದ ದೇವಾಲಯಗಳಾದ ರಾಮನಗರ ತಾಲೂಕಿನ 1) ಶ್ರೀ ರೇವಣ ಸಿದ್ದೇಶ್ವರ ದೇವಾಲಯ, ಚನ್ನಪಟ್ಟಣ ತಾಲೂಕಿನ 2) ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ, 3) ಶ್ರೀ ಅಪ್ರಮೇಯ ಸ್ವಾಮಿ ದೇವಾಲಯ ಕನಕಪುರ ತಾಲೂಕಿನ 4) ಶ್ರೀ ಕಬ್ಬಾಳಮ್ಮ ದೇವಾಲಯ, 5) ಶ್ರೀ ಕಲ್ಲಳ್ಳಿ ವೆಂಕಟರಮಣ ದೇವಾಲಯ, ಮಾಗಡಿ ತಾಲೂಕಿನ 6) ತಿರುಮಲೆ ಶ್ರೀ ರಂಗನಾಥ ಸ್ವಾಮಿ ದೇವಾಲಯ ಮತ್ತು ಸಾವನದುರ್ಗದ 7) ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಗಳಲ್ಲಿ ಭಕ್ತರಿಗೆ  ಮುಂದಿನ ಆದೇಶದವರೆಗೆ ಪ್ರವೇಶವಿಲ್ಲ. ಆದರೆ ದಿನನಿತ್ಯ ಶಾಸ್ತ್ರ, ಸಂಪ್ರದಾಯದಂತೆ ನಡೆಯುವ ಧಾರ್ಮಿಕ ಪೂಜಾ ವಿಧಿ-ವಿಧಿ ವಿಧಾನಗಳನ್ನು ಮತ್ತು ಪೂಜಾ ಕೈಂಕರ್ಯಗಳನ್ನು ದೇವಾಲಯದ  ಒಳ ಪ್ರಾಕಾರದಲ್ಲಿ ಯಥಾ ರೀತಿ ಮುಂದುವರೆಸಲು ಜಿಲ್ಲಾಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಬಿ ಮತ್ತು ಸಿ ವರ್ಗಕ್ಕೆ ಸೇರಿದ ಧಾರ್ಮಿಕ ಸಂಸ್ಥೆಗಳು ಹಾಗೂ ಖಾಸಗಿ ಧಾರ್ಮಿಕ ಸಂಸ್ಥೆಗಳು, ಪೂಜಾ ಸ್ಥಳಗಳು, ಆಧ್ಯಾತ್ಮಿಕ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಉಲ್ಲೇಖ (1)ರ ಮಾರ್ಗಸೂಚಿಗಳನ್ವಯ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಅವರು ಆದೇಶ ನೀಡಿದ್ದಾರೆ.

ಮಾರ್ಗಸೂಚಿಯಲ್ಲಿನ ನಿಭಂದನೆಗಳನ್ನು ಪಾಲನೆ ಮಾಡುವಲ್ಲಿ ಯಾವುದೇ ರೀತಿಯ ಲೋಪದೋಷಗಳು ಕಂಡು ಬಂದಲ್ಲಿ  ಸಂಬಂಧಿಸಿದ ದೇವಾಲಯದ ಸಮಿತಿಯವರು/ಟ್ರಸ್ಟಿಯವರು/ಆಡಳಿತಾಧಿಕಾರಿ/ ಕಾಯನಿರ್ವಹಾಕ ಅಧಿಕಾರಿ/ ಅರ್ಚಕರು  ಮತ್ತು ಇನ್ನಿತರೆ ಸಿಬ್ಬಂದಿಗಳನ್ನು ನೇರಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ದ ಕಾನೂನಿ ರೀತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

…………..

DC order