
ರಾಮನಗರ, 27/09/2025: ಇಲ್ಲಿನ ರಂಗರಾಯರ ದೊಡ್ಡಿ ಕೆರೆಯಲ್ಲಿ ದೋಣಿ ವಿಹಾರಕ್ಕೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಶನಿವಾರ ಚಾಲನೆ ನೀಡಿದರು. ವಾಟರ್ ಸ್ಕೂಟರ್ ಚಾಲನೆ ಮಾಡುವ ಮೂಲಕ ದೋಣಿ ವಿಹಾರವನ್ನು ಉದ್ಘಾಟಿಸಿದರು.
ವಿಶ್ವ ಪ್ರವಾಸೋಧ್ಯಮ ದಿನದ ಅಂಗವಾಗಿ ಬೋಟಿಂಗ್, ವಾಟರ್ ರೈಡಿಂಗ್ ಗೇಮ್ಸ್ ಗಳಿಗೆ ವಿದ್ಯಕ್ತವಾಗಿ ಚಾಲನೆ ರ್ಸಕ್ಕಿದೆ.
ಈ ವೇಳೆ ಮಾತನಾಡಿದ ಶಾಸಕರು, ರಾಮನಗರ ಜನತೆ ಜಲ ಕ್ರೀಡೆಗಳ ಅನುಭವ ಪಡೆಯಲು ಸಾಧ್ಯವಾಗಿದೆ. ಯಾವ ಜಿಲ್ಲೆಯಲ್ಲೂ ಇಂತಹ ಅವಕಾಶ ಇರಲಿಲ್ಲ. ಇದೀಗ ಪ್ರವಾಸೋದ್ಯಮ ಅಭಿವೃದ್ಧಿಯ ದೂರದೃಷ್ಟಿ ಇಟ್ಟುಕೊಂಡು ಆಯ್ದ ಕೆರೆಗಳಲ್ಲಿ ಪ್ರವಾಸಿಗರ ಮನರಂಜನೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ರಾಮನಗರದ ರಂಗರಾಯರದೊಡ್ಡಿ ಕೆರೆ, ಬಿಡದಿಯ ನೆಲ್ಲಿಗುಡ್ಡ ಕೆರೆ, ಮಾಗಡಿ ವೈ.ಜಿ.ಗುಡ್ಡ ಕೆರೆ ಹಾಗೂ ಮರಳವಾಡಿ ಬಳಿಯ ರಾವುತ್ತನ ಹಳ್ಳಿ ಕೆರೆಯಲ್ಲಿ ಜಲ ಕ್ರೀಡೆಗಳ ಸೇವೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಾಹಸ ಜಲ ಕ್ರೀಡೆಗಳು ಮಾತ್ರವಲ್ಲದೆ ಕೆರೆ ಬಳಿ ರೆಸ್ಟೋರೇಂಟ್, ವಸತಿ ಗೃಹ, ಸುಸಜ್ಜಿತ ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಪ್ರವಾಸೋದ್ಯಮ ಮೂಲ ಸೌಕರ್ಯಗಳನ್ನು ಮುಂದಿನ ದಿನಗಳಲ್ಲಿ ಕಲ್ಪಿಸಲಾಗುವುದು. ಟಿಕೆಟ್ ದರಗಳು ಇನ್ನಷ್ಟೇ ನಿಗದಿ ಆಗಬೇಕು. ವಿದ್ಯಾರ್ಥಿ ಗಳಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಲು ಸೂಚಿಸಲಾಗಿದೆ, ಸುಸಜ್ಜಿತ ವಿದ್ಯುತ್ ದೀಪಗಳನ್ನು ಅಳವಡಿಸಿ ರಾತ್ರಿ 8 ರವರೆಗೆ ವಿಹಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.
ಈ ವೇಳೆ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್, ಜಿಲ್ಲಾ ಪಂಚಾಯತ ಸಿಇಓ ಅನ್ಮೋಲ್ ಜೈನ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ರಾಜು, ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಉಪಾಧ್ಯಕ್ಷೆ ಆಯಿಷಾಬಾನು, ಕೆಎಸ್‌ಐಸಿ ಅದ್ಯಕ್ಷ ಎಸ್.ಗಂಗಾಧರ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್ ದೇವು, ಪೌರಾಯುಕ್ತ ಡಾ.ಜಯಣ್ಣ,ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಹಾಗೂ ಇತರರು ಇದ್ದರು.
