
ರಾಮನಗರ: ಪ್ರತಿ ವರ್ಷ ನವೀನ ಆಕರ್ಷಣೆಗಳ ಮೂಲಕ ನಾಗರೀಕರಲ್ಲಿ ಧಾರ್ವಿಕ ಭಾವನೆಯನ್ನು ಬಲಗೊಳಿಸುತ್ತಿರುವ ಇಲ್ಲಿನ ಆರ್ಯ ವೈಶ್ಯ ಸಭಾ ಈ ಬಾರಿ ವಾಸವಿ ಜಯಂತಿಯಂದು ಬಣ್ಣ, ಬಣ್ಣದ ರೇಷ್ಮೆ ನೂಲಿನಿಂದಲೇ ತಯಾರಾದ 13 ಅಡಿ ಎತ್ತರದ ಶ್ರೀ ವಾಸವಿ ಮಾತೆಯ ಪ್ರತಿ ರೂಪ ಮತ್ತು ಅಯೋಧ್ಯೆಯ ಬಾಲರಾಮನ ತದ್ರೂಪಿನ ದರ್ಶನದ ವ್ಯವಸ್ಥೆ ಸಮಸ್ತ ನಾಗರೀಕರಿಗಾಗಿ ಮಾಡಿದೆ.
ಈ ಬಾರಿ ಮೇ 15ರ ಬುಧವಾರದಿಂದ ಮೇ 18ರ ಶನಿವಾರದವರೆಗೆ ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ವಾಸವಿ ಜಯಂತಿ ಆಚರಣೆಯನ್ನು ಆಯೋಜಿಸಲಾಗಿದೆ. ಈ ಸಂದರ್ಭದ ಪ್ರಯುಕ್ತ ದೇವಾಲಯದ ಪಕ್ಕದಲ್ಲೇ ಇರುವ ಶ್ರೀ ಕನ್ಯಕಾ ಮಹಲ್ನಲ್ಲಿ 13 ಅಡಿ ಎತ್ತರದ ವಾಸವಿ ಮಾತೆಯ ಪ್ರತಿಮೆ ಮತ್ತು ಅಯೋಧ್ಯೆಯ ಬಾಲರಾಮನ ತದ್ರೂಪಿನ ಪ್ರತಿಮೆಯನ್ನು ತತ್ಕಾಲಿಕವಾಗಿ ಸ್ಥಾಪಿಸಿ ನಾಗರೀಕರ ದರ್ಶನ ಪಡೆಯಲು ಅನುಕೂಲ ಮಾಡಿದ್ದಾರೆ.
ದೇವರ ಪ್ರತಿಮೆಗಳಿಗೆ ಅಲಂಕಾರ ಮಾಡುವ ನೈಪುಣ್ಯ ಪಡೆದಿರುವ ರಾಧಾಕೃಷ್ಣ ಶಾಸ್ತ್ರಿಯವರ ಕ್ರಿಯಾಶೀಲತೆಗೆ ಈ ಎರಡೂ ಆಕರ್ಷಣೆಗಳು ಸಾಕ್ಷಿಯಾಗಿವೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಿರುವ ಬಾಲರಾಮನನ್ನು ಹೋಲುವ ತದ್ರೂಪು ಭಕ್ತರ ಮನಸೂರೆಗೊಳ್ಳಲಿದೆ.
ಪಾರ್ವತಿ ದೇವಿಯೂ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ಅವತಾರದ ಮೂಲಕ ಸಮಾನತೆ, ನ್ಯಾಯ ಮತ್ತು ಸೇವೆಯ ಪರಮೆಯನ್ನು ತಿಳಿಸಿದ್ದಾಳೆ ಎಂಬುದು ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ಭಕ್ತರ ಅಭಿಪ್ರಾಯ. 13 ಅಡಿ ಎತ್ತರದ ಈಕೆಯ ಮೂರ್ತಿಯ ದರ್ಶನ ಪಡೆಯುವ ಭಕ್ತರಿಗೆ ದೈವಾನುಗ್ರಹವಾಗಲಿದೆ ಎಂದು ಆರ್ಯ ವೈಶ್ಯ ಸಭಾದ ಪದಾಧಿಕಾರಿಗಳು ತಿಳಿಸಿದ್ದಾರೆ.
ರಾಮನಗರದ ಆರ್ಯ ವೈಶ್ಯ ಸಭಾ ಇಲ್ಲಿನ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ಆರ್ಯ ವೈಶ್ಯ ಸಮಾಜದ ಸದಸ್ಯರು ನಗರದ ಭಕ್ತರ ಸಹಕಾರದಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ಭಕ್ತಿ ಮತ್ತು ಶ್ರದ್ದೆುಂದ ನಡೆಸಿಕೊಂಡು ಬರುತ್ತಿದ್ದಾರೆ. ಮಹಾಶಿವರಾತ್ರಿ, ನವರಾತ್ರಿ, ಹನುಮಜಯಂತಿ, ಹೀಗೆ ಧಾರ್ಮಿಕವಾಗಿ ಪ್ರಮುಖ ಆಚರಣೆಗಳನ್ನು ಕಟ್ಟುನಿಟ್ಟಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ದೇವಾಲಯದಲ್ಲಿ ಸ್ಥಾಪನೆಯಾಗಿರುವ ಜಲಕಂಠೇಶ್ವರ ಸ್ವಾಮಿಗೆ ಭಕ್ತರು ತಾವೇ ಸ್ವತಃ ನೀರಿನ ಅಭಿಷೇಕ ಮಾಡಲು ಅನುಕೂಲ ಕಲ್ಪಿಸಿರುವುದು ಈ ದೇವಾಲಯದ ವಿಶೇಷವಾಗಿದ್ದು ಇಡೀ ಜಿಲ್ಲೆಯ ಆಸ್ತಿಕರ ಗಮನ ಸೆಳೆದಿದೆ.
………….
