ರಾಮನಗರ, ಜೂನ್ 17: ಭಾರತ ಮತ್ತು ಚೀನಾ ಗಡಿ ಭಾಗದಲ್ಲಿರುವ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ಸಂಜೆ ನಡೆದ ಹೊಡೆದಾಟದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ನಗರದ ನಾಗರೀಕರು ಶ್ರದ್ದಾಂಜಲಿ ಅರ್ಪಿಸಿದರು.
ನಗರದ ರೋಟರಿ-ಬಿಜಿಎಸ್ ಆಸ್ಪತ್ರೆ ಬಳಿ ಇರುವ ಶ್ರೀ ವಿವೇಕಾನಂದ ಪ್ರತಿಮೆಯ ಮುಂಭಾಗ ಸಾಮಾಜಿಕ ಅಂತರ ಕಾಯ್ದುಕೊಂಡು ನಾಗರೀಕರು ಒಂದು ನಿಮಿಷದ ಮೌನವನ್ನು ಆಚರಿಸಿ ಹುತಾತ್ಮರಾದವರ ಆತ್ಮಕ್ಕೆ ಶಾಂತಿ ಕೋರಿದರು.
ಇದೇ ವೇಳೆ ವನವಾಸಿ ಕಲ್ಯಾಣ ಸಮಿತಿಯ ಕಾರ್ಯದರ್ಶಿ ಸತೀಷ್ ಮಾತನಾಡಿ ಚೀನಾದ ತಗಾದೆಯನ್ನು ಖಂಡಿಸಿದರು. ಶಾಂತಿಪ್ರಿಯ ರಾಷ್ಟ್ರ ಭಾರತದ ವಿರುದ್ದ ಚೀನಾ ತಗಾದೆ ಎಬ್ಬಿಸಿದೆ. ನಮ್ಮ ನೆಲದಮೇಲೆ ರಸ್ತೆ ನಿರ್ಮಿಸುವುದನ್ನು ಅದು ಸಹಿಸದೆ ತಕರಾರು ಎಬ್ಬಿಸಿದೆ. ಭಾರತ ಸದಾ ಶಾಂತಿಯನ್ನು ಬಯಸುವುದನ್ನೇ ದೌರ್ಬಲ್ಯ ಎಂದು ಚೀನಾ ಭಾವಿಸಿದೆ ಎಂದು ಕಿಡಿಕಾರಿದರು.
ಚೀನಾಕ್ಕೆ ತಕ್ಕ ಬುದ್ದಿ ಕಲಿಸುವ ಸಂದರ್ಭ ಬಂದಿದ್ದು, ಭಾರತೀಯರು ಚೀನಾದಲ್ಲಿ ಉತ್ಪದಾನೆಯಾದ ವಸ್ತುಗಳನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು.

ಶ್ರದ್ದಾಂಜಲಿ ಸಭೆಯಲ್ಲಿ ನಾಗರೀಕರು, ವ್ಯಾಪಾರಸ್ಥರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
