ರಾಮನಗರ: ಕೆಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭಕ್ಷಿ ಕೆರೆ ಕೋಡಿ ಬಿದ್ದು, ಸೀರಳ್ಳದಲ್ಲಿ ನೀರಿನ ಹರಿವು ಸರಾಗವಾಗಿ ಹರಿಯದೆ ಟಿಪ್ಪು ನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ ನಷ್ಟಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ಮಂಚನಬೆಲೆ ಜಲಾಶಯದಲ್ಲಿ ನೀರಿನ ಮಟ್ಟ ಏರುತ್ತಿದ್ದು, ಸೋಮವಾರ ರಾತ್ರಿ ಸುಮಾರು 6 ಸಾವಿರ ಕ್ಯೂಸೆಕ್ಸ್ ನೀರನ್ನು ಅರ್ಕಾವತಿ ನದಿಗೆ ಬಿಡಲಾಗಿದೆ. ಅರ್ಕಾವತಿ ನದಿ ತುಂಬಿ ಹರಿಯುತ್ತಿದೆ.
ಟಿಪ್ಪು ನಗರದಲ್ಲಿ ಭಾರಿ ನಷ್ಟ
ನಗರದ ಹೊರವಲಯದಲ್ಲಿರುವ ಭಕ್ಷಿ ಕೆರೆ ಕೋಡಿ ಬಿದ್ದ ಪರಿಣಾಮ ಸೀರಳ್ಳದಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ಸೀರಳ್ಳದಲ್ಲಿ ಗಿಡಗಂಟೆಗಳು ಬೆಳೆದಿದೆ, ಇಲ್ಲಿ ತಡೆಗೋಡೆಗಳು ನಿರ್ಮಾಣವಾಗಿಲ್ಲ. ಹಳ್ಳದಲ್ಲಿ ನೀರು ಸರಾಗವಾಗಿ ಹರಿಯದ ಕಾರಣ ಮಂಗಳವಾರ ಬೆಳಗಿನ ಜಾವ 3 ಗಂಟೆವೇಳೆಯಲ್ಲಿ ಹಳ್ಳದ ನೀರು ಟಿಪ್ಪು ಶಾಲೆಯ ಬಳಿ ಇರುವ ಮನೆಗಳು, ರೇಷ್ಮೆ ರೀಲಿಂಗ್ ಘಟಕಗಳು, ಅಂಗಡಿಗಳಿಗೆ ನುಗ್ಗಿದೆ.
ರಸ್ತೆ ಬದಿಯಲ್ಲಿ ನಿಂತಿದ್ದ ಕಾರು, ದ್ವಿಚಕ್ರವಾಹನಗಳು ಸಹ ನೀರಿನಲ್ಲಿ ಮುಳುಗಿದ್ದವು, ರಾತ್ರಿ 3 ಗಂಟೆಯಿಂದ ಆತಂಕದಲ್ಲೇ ಕಾಲ ಕಳೆದಿದ್ದಾಗಿ, ಬೆಳಿಗ್ಗೆ 6 ಗಂಟೆ ವೇಳೆಗೆ ನೀರು ಕಡಿಮೆಯಾಗಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ.
ಸೈಯದ್ ಸಾದಿಕ್ ಎಂಬುವರ ಮನೆಯೊಳಗೆ ಸುಮಾರು 4 ಅಡಿಗಳಷ್ಟು ನೀರು ತುಂಬಿ ಹಾಸಿಗೆ, ಫ್ರಿಡ್ಜ್, ಲ್ಯಾಪ್ಟಾಪ್, ಪುಸ್ತಕ ಹೀಗೆ ಎಲ್ಲವೂ ಹಾಳಾಗಿದೆ. ಇಲ್ಲಿರುವ ರೇಷ್ಮೆ ರೀಲಿಂಗ್ ಘಟಕಗಳ ಒಳಗು ಮಣ್ಣು, ಕಲ್ಮಶ ಮಿಶ್ರಿತ ನೀರು ಹರಿದು ಅನಾಹುತ ಸೃಷ್ಠಿಯಾಗಿದೆ. ಅದೃಷ್ಠವಶಾತ್ ಪ್ರಾಣ ಹಾನಿಯಾಗಿಲ್ಲ.
ಹಾವುಗಳು!
ಸೀರಳ್ಳದ ನೀರಿನ ಜೊತೆಗೆ ಮನೆಗಳ ಬಳಿ ಹಾವುಗಳು ಸಹ ಕಂಡು ಬಂದವು. ಪ್ರವಾಹದ ಭೀತಿಯ ಜೊತೆಗೆ ಹಾವುಗಳ ಆತಂಕವೂ ಇತ್ತು. ಒಟ್ಟಾರೆ ನರಕ ಸದೃಶವಾಗಿತ್ತು ಎಂದು ಅಲ್ಲಿನ ನಿವಾಸಿಗಳು ನೋವು ತೋಡಿಕೊಂಡಿದ್ದಾರೆ.





ನಗರಸಭೆ ಅಧ್ಯಕ್ಷರು, ಅಧಿಕಾರಿಗಳ ಭೇಟಿ
ಮಂಗಳವಾರ ಬೆಳಿಗ್ಗೆ 3 ಗಂಟೆಗೆ ನಗರಸಭೆ ವಾರ್ಡು 23 ಟಿಪ್ಪನಗರದಲ್ಲಿ ಅನಾಹುತವಾಗಿರುವ ಬಗ್ಗೆ ಮಾಹಿತಿ ಸಿಕ್ಕಕೂಡಲೆ ನಗರಸಭಾ ಸದಸ್ಯರುಗಳಾದ ಫೈರೋಜ್, ಸೋಮಶೇಖರ್ (ಮಣಿ), ಪ್ರಮುಖರಾದ ಗೂಳಿ ಕುಮಾರ್ ಮತ್ತು ನಗರಸಭೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡರು. ನಗರಸಭಾಧ್ಯಕ್ಷೆ ಬಿ.ಸಿ.ಪಾರ್ವತಮ್ಮ, ಆಯುಕ್ತ ನಂದಕುಮಾರ್ ಸಹ ಸ್ಥಳಕ್ಕೆ ಭೇಟಿ ಕೊಟ್ಟು ನೊಂದ ನಿವಾಸಿಗಳ ಅಹವಾಲು ಆಲಿಸಿದರು.
