* ನಗರದ ಕಾಯಕಲ್ಪಕ್ಕೆ ಪ್ರಾಶಸ್ತ್ಯ, ನಗರಸಭೆಯಲ್ಲಿ ಆಡಳಿತ ಸುಧಾರಿಸುವ ಆಶಯದಲ್ಲಿ ಜನ ಸಾಮಾನ್ಯರು

ರಾಮನಗರ; ಡಿ.24,2024: ರಾಮನಗರ ನಗರಸಭೆಯ ಅಧ್ಯಕ್ಷರಾಗಿ ಶಶಿ ಅಂತಲೇ ಜನತೆ ಪ್ರೀತಿಯಿಂದ ಕರೆಯುವ ಕೆ.ಶೇಷಾದ್ರಿ ಆಯ್ಕೆಯಾಗಿದ್ದಾರೆ. 5ನೇ ವಾರ್ಡನ್ನು ಪ್ರತಿನಿಧಿಸುತ್ತಿರುವ ಇವರು ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವುದು ಜನರ ಆಶಯವೂ ಆಗಿತ್ತು. ರಾಮನಗರ ನಗರ ಪ್ರದೇಶದ ಅಭಿವೃದ್ದಿಗೆ ಇವರ ಅವಶ್ಯಕತೆ ಇದೆ ಎಂಬುದು ಜನಸಾಮಾನ್ಯರ ಅಭಿಪ್ರಾಯ, ಕೆ.ಶೇಷಾದ್ರಿ ಜನಾಶಯದಂತೆ ಆಯ್ಕಮಾಡಿದ ನಗರಸಭಾ ಸದಸ್ಯರನ್ನು ನಗರದ ನಾಗರೀಕರು ಅಭಿನಂದಿಸಿದ್ದಾರೆ.
ಶಶಿ ಅವರ ಬಗ್ಗೆ ಈ ಪರಿಯ ವಿಶ್ವಾಸವೇಕೆ?
ಜನಪರ ಹೋರಾಟಗಳಿಂದಲೇ ಗುರುತಿಸಿಕೊಂಡಿರುವ ಕೆ.ಶೇಷಾದ್ರಿ, ಸಾಂಸ್ಕೃತಿಕ ಸಂಘಟನೆಯ ಚತುರ. ಸಾಮಾಜಿಕ ಕಳಕಳಿಯುಳ್ಳ ರಾಜಕಾರಣಿ. ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಇವರಿಗೆ ನಗರಾಭಿವೃದ್ದಿಯ ಬಗ್ಗೆ ಸ್ಪಷ್ಟ ಕಲ್ಪನೆಗಳಿವೆ. ಹೀಗಾಗಿಯೇ ಇವರ ನೇತೃತ್ವದಲ್ಲಿ 2023ರಲ್ಲಿ ಸಾರ್ವತ್ರಿಕ ಚುನಾವಣೆಗೆ ಮುನ್ನ “ಇದೇನು ಕರ್ಮ” ಎಂಬ ಶೀರ್ಷಿಕೆಯಡಿಯಲ್ಲಿ ನಗರದಲ್ಲಿ ಮೂಲ ಸೌಲಭ್ಯಗಳ ಕೊರತೆ ಕುರಿತು ಜನಜಾಗೃತಿ ಮೂಡಿಸಲು ಹೋರಾಟ ನಡೆಸಿದ್ದರು. ಈ ಹೋರಾಟ ಜನ ಸಮುದಾಯದ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಜಿಲ್ಲಾ ಕೇಂದ್ರದ ಹೆಸರಿಗೆ ತಕ್ಕಂತೆ ನಗರದ ಅಭಿವೃದ್ದಿಗೆ 550 ಕೋಟಿ ರೂ ಬೇಕು ಎಂದು ಅಂದಾಜಿಸಿದ್ದರು. ಈ ಕುರಿತು ತಮ್ಮ ಪಕ್ಷದ ವರಿಷ್ಠರ ಗಮನವನ್ನು ಸೆಳೆದಿದ್ದರು. ಶಶಿ ಅವರ ಈ ರೀತಿಯ ಚಿಂತನೆಗಳಿಂದಾಗಿಯೇ ಜನರ ಪ್ರೀತಿಗಳಿಸಿದ್ದಾರೆ. ಶಶಿ ಮತ್ತೆ ನಗರಸಭೆಯ ಅಧ್ಯಕ್ಷರಾಗಲಿ ಎಂಬ ಜನಾಶಯ ಸದಾ ಇತ್ತು.
1969ರಲ್ಲಿ ಜನನ, ಹೋರಾಟವೇ ಉಸಿರು!
ರಾಮನಗರದ ಶ್ರೀಮತಿ ಆಂಜನಮ್ಮ ಹಾಗೂ ಶ್ರೀ ಕೃಷ್ಣಪ್ಪ ಅವರ ದಂಪತಿಗಳಿಗೆ ದಿನಾಂಕ 21-01-1969 ರಲ್ಲಿ ಜನಿಸಿದ ಕೆ.ಶೇಷಾದ್ರಿ(ಶಶಿ)ಯವರು ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ರಾಮನಗರದಲ್ಲಿ ಮತ್ತು ಉನ್ನತ ಶಿಕ್ಷಣವನ್ನು ಮೈಸೂರು ಹಾಗೂ ಬೆಂಗಳೂರಿನಲ್ಲಿ ಪಡೆದಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡಿದ್ದರು. ಸಮ ಸಮಾಜ ನಿರ್ಮಾಣದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅನೇಕ ಮಹತ್ತರ ಸಾಮಾಜಿಕ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಶ್ರಮಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವವನ್ನು ಧಾರ್ಮಿಕತೆ ಮಾತ್ರ ಸೀಮಿತಗೊಳಿಸದೆ, ಸರ್ವ ಧರ್ಮ ಸಮನ್ವಯತೆಗೆ ಪ್ರತೀಕವನ್ನಾಗಿ ಮಾಡಿದ ಹೆಗ್ಗಳಿಕೆ ಇವರದ್ದು.
1997ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ 15 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದು, ಶಶಿ ಅವರಿಗಿದ್ದ ಜನಬಲ ನಿರೂಪಿಸಿತ್ತು. ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಪ್ರಮುಖ ರಾಜಕಾರಣಿಗಳ ಗಮನ ಸೆಳೆದಿತ್ತು.
ಜನಜಾಗೃತಿ ವೇದಿಕೆ ಮೂಲಕ ಹಲವಾರು ಜನಪರ ಹೋರಾಟಗಳನ್ನು ಕೈಗೊಂಡಿದ್ದಾರೆ. ರೈಲ್ವೇ ಕೆಳ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಸತತ 8 ಗಂಟೆಗಳ ಕಾಲ ರೈಲ್ವೇ ತಡೆ ಚಳುವಳಿ ನಡೆಸಿದ್ದು ದೆಹಲಿಯಲ್ಲಿರುವ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೂ ಹೋಗಿತ್ತು.
ಚೈನಾ ರೇಷ್ಮೆ ಆಮದು ವಿರೋಧಿಸಿ ರೈತರು ಮತ್ತು ರೀಲರ್ಗಳ ಪರ ನೇತೃತ್ವವಹಿಸಿ ನಡೆಸಿದ ಹೋರಾಟಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ.

2008ರಲ್ಲಿ ರಾಮನಗರದ ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವೂ ಇದೆ. ಇವರು ಅಧ್ಯಕ್ಷರಾಗಿದ್ದ ವೇಳೆ ರಸ್ತೆಗಳ ಅಗಲೀಕರಣ, ನಗರದ ನೈರ್ಮಲ್ಯಕ್ಕೆ ಆಧ್ಯತೆ ನೀಡಿದ್ದನ್ನು ಜನತೆ ಇಂದು ಸಹ ಸ್ಮರಿಸುತ್ತಾರೆ. ಇಂತಹ ಹತ್ತು ಹಲವು ಯೋಜನೆಗಳು ಮತ್ತೆ ಜಾರಿಯಾಗಲಿವೆ ಎಂಬ ಆಶಯ ನಗರದ ನಾಗರೀಕರದ್ದು.
ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸ್ವಾಮಿ ವಿವೇಕಾನಂದರ ಸ್ಪೂರ್ತಿ
ಸ್ವಾಮಿ ವಿವೇಕಾನಂದರ ಆದರ್ಶಗಳು, ಚಿಂತನೆಗಳಿಂದ ಸ್ಪೂರ್ತಿ ಪಡೆದಿರುವ ಶಶಿ, ಯುವಜನರ ವ್ಯಕ್ತಿತ್ವ ವಿಕಾಸಕ್ಕೆ ಶ್ರಮಿಸಿದ್ದಾರೆ. ನಗರಸಭೆವತಿಯಿಂದ ಗಣಕಯಂತ್ರ ತರಬೇತಿಗೆ ಮುನ್ನುಡಿ ಬರೆದ ಕೀರ್ತಿ ಇವರಿಗಿದೆ.
ಜಿಲ್ಲಾ ಕೇಂದ್ರದ ಹೆಸರಿಗೆ ತಕ್ಕಂತೆ ಅಭಿವೃದ್ದಿಯಾಗಲಿ
ರಾಮನಗರ ನಗರ ಜಿಲ್ಲಾ ಕೇಂದ್ರವಾಗಿದೆ. ಜಿಲ್ಲಾ ಕೇಂದ್ರಕ್ಕೆ ತಕ್ಕಂತೆ ಕೆ.ಶೇಷಾದ್ರಿ ಅವರ ಅಧ್ಯಕ್ಷತೆಯಲ್ಲಿ ಅಭಿವೃದ್ದಿಯಾಗಲಿ ಎಂದು ಜಾತಿ, ಧರ್ಮ, ವಯಸ್ಸು, ಲಿಂಗ ಬೇಧವಿಲ್ಲದೆ ಜನತೆ ಆಶಯ ವ್ಯಕ್ತಪಡಿಸಿದ್ದಾರೆ. ಕಳಂಕ ರಹಿತ ರಾಜಕೀಯ ಜೀವನ ನಡೆಸಿರುವ ಕೆ.ಶೇಷಾದ್ರಿ ಅವರ ಅಧ್ಯಕ್ಷತೆಯಲ್ಲಿ ನಗರಸಭೆಯಲ್ಲಿ ಆಡಳಿತ ಸುಸೂತ್ರವಾಗಿ ನಡೆಸಿ ಎಂದು ನಗರದ ಜನತೆ ಕೆ.ಶೇಷಾದ್ರಿ ಅವರನ್ನು ಹಾರೈಸಿದ್ದಾರೆ.
……………….
