ಶಾಲಾ ದಾಖಲಾತಿ ಆರಂಭಿಸಲು ಅನುಮತಿ ಕೊಡಿ: ಖಾಸಗಿ ಶಾಲೆಗಳ ಪ್ರತಿನಿಧಿಗಳಿಂದ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ

ರಾಮನಗರ, 28 ಮೇ 2020: ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆರಂಭಿಸಲು ಅನುಮತಿ ಕೊಡುವಂತೆ ಮತ್ತು ಆರ್.ಟಿ.ಇ ಹಣವನ್ನು ಒಂದೇ ಕಂತಿನಲ್ಲಿ ಸಂಪೂರ್ಣ ಬಿಡುಗಡೆ ಮಾಡುವಂತೆ ಜಿಲ್ಲೆಯ ಖಾಸಗಿ ಶಾಲೆಗಳ ಒಕ್ಕೂಟದ ಪದಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆದ ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಭವನದಲ್ಲಿ ಅಧಿಕಾರಿಗಳ ಸಭೆಯ ನಂತರ ಅವರನ್ನು ಭೇಟಿ ಮಾಡಿದ ಖಾಸಗಿ ಶಾಲೆಗಳ ಪದಾಧಿಕಾರಿಗಳು, ಆರ್.ಟಿ. ಇ ಹಣವನ್ನು ಸರ್ಕಾರ ಶಾಲೆಗಳಿಗೆ ಎರಡು ಕಂತುಗಳಲ್ಲಿ ಕೊಡುತ್ತಿತ್ತು. ಆದರೆ ಈ ಬಾರಿ ಒಂದು ಕಂತು ಸಹ ಪಾವತಿಯಾಗಿಲ್ಲ. ಹೀಗಾಗಿ ಒಂದೇ ಕಂತಿನಲ್ಲಿ ಸಂಪೂರ್ಣವಾಗಿ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಖಾಸಗಿ ಶಾಲೆಗಳಲ್ಲಿ ಶುಲ್ಕಗಳನ್ನು ಹೆಚ್ಚಿಸಬಾರದು ಎಂದು ಇಲಾಖೆ ಆದೇಶ ಹೊರಡಿಸಿದೆ. ಆದರೆ ಅನೇಕ ಶಾಲೆಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಶಿಕ್ಷಕರಿಗೆ ವೇತನವನ್ನು ಕೊಡಬೇಕಾಗಿದೆ.  ಕೋವಿಡ್ 19 ಸೋಂಕು ಹರಡದಂತೆ ಶಾಲೆಯ ಆವರಣವನ್ನು ಸದಾ ಶುಚಿಗೊಳಿಸಬೇಕಾಗಿದೆ.  ಹೀಗೆ ಅನೇಕ ವೆಚ್ಚಗಳನ್ನು ಪಾವತಿಸಬೇಕಾಗಿದೆ. 2020-21ನೇ ಸಾಲಿನಲ್ಲಿ ಖಾಸಗಿ ಶಾಲೆಗಳಲ್ಲಿನ ಶುಲ್ಕದಲ್ಲಿ ಕನಿಷ್ಠ ಶೇ 10ರಷ್ಟಾದರು ಹೆಚ್ಚಿಸಲು ಅನುಮತಿ ಕೊಡಬೇಕು ಎಂದು ವಿನಂತಿಸಿದ್ದಾರೆ.

2020-21ನೇ ಶೈಕ್ಷಣಿಕ ಸಾಲಿಗೆ ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಶಾಲೆಗಳಲ್ಲಿ ದಾಖಲಾತಿಗೆ ಅನುಮತಿ ಕೊಡಬೇಕು ಎಂದು ಕ್ಯಾಮ್ಸ್ ಜಿಲ್ಲಾ ಘಟಕದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಆಯುಕ್ತರ ಭೇಟಿ ನಿಯೋಗದಲ್ಲಿ ವೆಂಕಟಸುಬ್ಬಯ್ಯ, ಪಟೇಲ್ ಎಸ್ ರಾಜು, ಇಶಾಂತ್ ಎಸ್.ಬಿ, ಅಜ್ಗರ್ ಉಲ್ಲಾ , ಅಲ್ತಾಫ್‌ ಮುಂತಾದವರು ಹಾಜರಿದ್ದರು.