೨೦೨೪ರ ಅಕ್ಟೋಬರ್ ತಿಂಗಳಿನಲ್ಲಿ ನನ್ನ ಭಾವಮೈದನ ಕುಟುಂಬದ ಪ್ರಾಯೋಜಕತ್ವದಲ್ಲಿ ಪುದುಚೆರಿ ನಗರದ (ಹಳೆಯ ಹೆಸರು – ಪಾಂಡಿಚೆರಿ) ಪ್ರವಾಸ ಕೈಗೊಂಡಿದ್ದೆ. ಫ್ರೆಂಚರ ಆಡಳಿತವಿದ್ದ ಈ ಪ್ರದೇಶದಲ್ಲಿ ಇನ್ನು ಅವರ ಸಂಸ್ಕೃತಿಯ ಕುರುಹುಗಳಿವೆ. ಕಟ್ಟಡಗಳಿವೆ. ಆದರೆ ಭಾರತೀಯ ಸಂಸ್ಕೃತಿ, ಪರಂಪರೆ ಅವೆಲ್ಲವನ್ನು ಹಿಂದಕ್ಕಟ್ಟಿದೆ!
ಪುದುಚೆರಿ…. ಇದೊಂದು ಕೇಂದ್ರಾಡಳಿತ ಪ್ರದೇಶ (ಯೂನಿಯನ್ ಟೆರಿಟರಿ). ಪೂರ್ವಕ್ಕೆ ಬೇ ಆಫ್ ಬೆಂಗಾಲ್ ಸಮುದ್ರ ಮತ್ತು ಉಳಿದ ದಿಕ್ಕುಗಳಲ್ಲಿ ತಮಿಳುನಾಡು ರಾಜ್ಯ ಸುತ್ತುವರೆದಿದೆ. ಪುದುಚೆರಿಯ ಜನ ಬಹುತೇಕ ತಮಿಳುನಾಡಿನ ಸಂಸ್ಕೃತಿ, ಭಾಷೆಯನ್ನೇ ಅನುಸರಿಸುತ್ತಿದ್ದಾರೆ.
ಪಲ್ಲವರು, ಚೋಳರು, ಪಾಂಡ್ಯರು ವಂಶದ ಆಳ್ವಿಕೆ ಇಲ್ಲಿತ್ತು. ತದ ನಂತರ ವಿಜಯನಗರದ ಒಡೆಯರು, ಬಿಜಾಪುರದ ಸುಲ್ತಾನರು ಸಹ ಈ ಪ್ರದೇಶವನ್ನು ಆಳುತ್ತಿದ್ದರು ಎಂಬುದು ಇತಿಹಾಸ. ಪರಕೀಯರ ದಾಳಿಗೆ ಭಾರತ ಒಳಗಾದ ನಂತರ ಪೋರ್ಚುಗೀಸರು, ಡಚ್ಚರು ವ್ಯಾಪಾರಕ್ಕೆಂದು ಬಂದು ಇಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಸ್ವಾತಂತ್ರö್ಯದ ಸಂದರ್ಭದಲ್ಲಿಯೂ ಪುದುಚೆರಿ ಫ್ರೆಂಚರ ಆಳ್ವಿಕೆಯಲ್ಲಿತ್ತು. ೧೯೫೪ರಲ್ಲಿ ಫ್ರೆಂಚರು ಪುದುಚೆರಿಯಿಂದ ಹೊರನಡೆದಿದ್ದಾರೆ.
ನಮ್ಮ ಪ್ರಯಾಣ
ಬೆಂಗಳೂರಿನಿಂದ ಪುದುಚೆರಿ ೩೨೦ ಕಿಮಿ ದೂರವಿದೆ. ಕಾರಿನಲ್ಲಿ ಪ್ರಯಾಣ. ಬೆಳಗ್ಗೆ ೮ ಗಂಟೆ ಸುಮಾರಿಗೆ ಪ್ರಯಾಣ ಆರಂಭವಾಗಿ ಮಧ್ಯಾಹ್ನ ೩ ಗಂಟೆ ವೇಳೆಗೆ ಹೊಸೂರು, ಕೃಷ್ಣಗಿರಿ, ಅರುಳ್ಮಿಗು, ತಿಂದಿವನಂ, ತಿರುವಣ್ಣಾಮಲೈ ಮೂಲಕ ಪುದುಚೆರಿ ತುಲುಪಿದೆವು. ನಾವು ತಂಗಿದ್ದು ದಿ ರೆಸಿಡೆನ್ಸಿ ಟವರ್ ಎಂಬ ಹೋಟೆಲ್‌ನಲ್ಲಿ.
ಮೊದಲ ದಿನ

ನಾವು ತಂಗಿದ್ದ ಹೋಟೆಲ್ನಲ್ಲೆ ಇದ್ದ ರೆಸ್ಟಾರಂಟ್‌ನಲ್ಲಿ ಮಧ್ಯಾಹ್ನದ ಊಟ ಸವಿದು, ಒಂದಿಷ್ಟು ವಿಶ್ರಾಂತಿಯ ನಂತರ ಸೇಕ್ರಡ್ ಹಾರ್ಟ್ ಬೆಸಿಲಿಕ ಚರ್ಚ ವೀಕ್ಷಣೆ. ನಂತರ ಶ್ರೀ ವರದರಾಜ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟೆವು. ತದನಂತರ ಅರುಳ್ಮಿಗು ಮನುಕುಲ ವಿನಾಯಕ ದೇವಾಲಯದ ಭೇಟಿ. ಈ ದೇವಾಲಯದ ಬಗ್ಗೆ ಸ್ಥಳೀಯರು ಸ್ವಾರಸ್ಯದ ಕಥೆ ಹೇಳುತ್ತಾರೆ. ವಿದೇಶಿಯರ ಆಡಳಿತವಿದ್ದಾಗ ಇಲ್ಲಿ ವಿನಾಯಕ ಮೂರ್ತಿಯನ್ನು ಸ್ಥಳೀಯರು ಸ್ಥಾಪಿಸಿದಾಗ, ಫ್ರೆಂಚರು ಮತ್ತು ಆಂಗ್ಲರಿಂದ ಬಹಳ ವಿರೋಧವಿತ್ತಂತೆ. ಹಲವಾರು ಬಾರಿ ವಿನಾಯಕನ ಮೂರ್ತಿಯನ್ನು ಸಮುದ್ರಕ್ಕೆ ಎಸೆದಿದ್ದರಂತೆ. ಆದರೆ ಪ್ರತಿ ಬಾರಿಯೂ ವಿನಾಯಕನ ಮೂರ್ತಿ ತನ್ನ ಸ್ಥಳದಲ್ಲೇ ಪುನಃ ಪ್ರತ್ಯಕ್ಷವಾಗುತ್ತಿತ್ತು ಎಂದು ಹೇಳುತ್ತಾರೆ ಸ್ಥಳೀಯರು. ಅನೇಕ ಬಾರಿ ಈ ಪವಾಡ ಮರುಕಳಿಸಿದ ನಂತರ ವಿದೇಶಿಯರು ಸಹ ಮೂರ್ತಿ ಪ್ರತಿಷ್ಠಾಪನೆಗೆ ಸಹಕರಿಸಲು ಆರಂಭಿಸಿದರು ಎಂಬುದು ಇಲ್ಲಿನ ಜನರ ಅಭಿಪ್ರಾಯ.
ವಿನಾಯಕನ ದೇವಾಲಯದ ನಂತರ ರಾಕ್ ಬೀಚ್‌ಗೆ ಭೇಟಿ ಕೊಟ್ಟೆವು. ಆಗ ಸಮಯ ರಾತ್ರಿ ೮.೧೫. ಆದರೂ ನೂರಾರು ಜನ ಅಲ್ಲಿ ನೆರೆದಿದ್ದರು. ನಾವು ಒಂದಿಷ್ಟು ಸಮಯ ಅಲ್ಲಿನ ಬಂಡೆಗಳ ಮೇಲೆ ಕುಳಿತಿದ್ದೆವು. ಸಮುದ್ರದ ದಡದಲ್ಲಿ ಮಹಾತ್ಮ ಗಾಂಧೀಜಿಯವರ ೧೩ ಅಡಿ ಎತ್ತರದ ಪ್ರತಿಮೆ ಇದೆ. ಪುದುಚೆರಿಯ ಪ್ರವಾಸಿ ತಾಣಗಳ ಪೈಕಿ ಇದು ಒಂದು. ಅಲ್ಲೇ ಪಕ್ಕದಲ್ಲಿ ಇರುವ ಮಾರುಕಟ್ಟೆಯಲ್ಲಿ ಬಗೆಬಗೆಯ ಧಿರಿಸು, ಮಹಿಳೆಯರ ಅಲಂಕಾರದ ವಸ್ತುಗಳು ಮಾರಾಟಕ್ಕೆ ಇಡಲಾಗಿದೆ.
ರಾಕ್ ಬೀಚ್ ನಂತರ ನಾವು ನೇರ ದಿ ರೆಸಿಡೆನ್ಸಿ ಟವರ್‌ಗೆ ಮರಳಿ ವಿಶ್ರಾಂತಿ ಪಡೆದೆವು.
ಎರಡನೇ ದಿನ
ದಿ ರೆಸಿಡೆನ್ಸಿ ಟವರ್ ಹೋಟೆಲ್‌ನ ಕೊಠಡಿಗಳ ಅಧುನಿಕತೆಯ ಬಗ್ಗೆ ಇಲ್ಲಿ ಪರಿಚಯ ಮಾಡಿಕೊಡಲು ಇಚ್ಚಿಸುತ್ತೇನೆ. ಕೊಠಡಿಗಳ ದೀಪಗಳು, ಎಸಿ, ಕರ್ಟನ್‌ಗಳು, ಟಿವಿ, ಚಾನಲ್‌ಗಳ ಬದಲಾವಣೆ ಹೀಗೆ ಎಲ್ಲವೂ ಐಪಾಡ್‌ನಲ್ಲಿ (ಆಪಲ್ ಕಂಪನಿಯ ಟ್ಯಾಬ್ಲೆಟ್) ನಿಯಂತ್ರಿಸಬಹುದು. ಈ ತಂತ್ರಜ್ಞಾನ ನಮ್ಮನ್ನು ವಿಸ್ಮಯಗೊಳಿಸಿತು.

ಎರಡನೇ ದಿನ ಬೆಳಿಗ್ಗೆ ಪಾಂಡಿ ಕಿಂಗ್ಸ್ ಬೋಟ್ ಸರ್ವಿಸ್ ಅವರ ದೋಣಿಯಲ್ಲಿ ಬೇ ಆಫ್ ಬೆಂಗಾಲ್ ಸಮುದ್ರದ ಹಿನ್ನೀರಿನ ಮ್ಯಾಂಗ್ರೋವ್ (ಸಮುದ್ರದ ತೀರದಲ್ಲಿ ಮರ-ಗಿಡಗಳ ಪೊದೆಗಳಿರುವ ಸ್ಥಳಗಳು) ವೀಕ್ಷಿಸಲು ಪ್ರಯಾಣ. ದೋಣಿ ಪ್ರಯಾಣದ ನಡುವೆ ಅರಿಕಮೆಡು ಎಂಬ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆವು. ಈ ಸ್ಥಳ ಪುರಾತತ್ವ ಇಲಾಖೆಯ ವಶದಲ್ಲಿದೆ. ರೋಮನ್ನರು, ಇರೋಪಿಯನ್ನರು ಇಲ್ಲಿ ವಾಸವಿದ್ದರೆಂದು ಹೇಳುತ್ತಾರೆ. ಅವರು ಇಟ್ಟಿಗೆಯಿಂದ ನಿರ‍್ಮಿಸಿದ ಕಟ್ಟಡದ ಅಳಿದುಳಿದ ಗೋಡೆಗಳು ಕಾಣಸಿಗುತ್ತವೆ. ಐತಿಹಾಸ ಪುಟಗಳಲ್ಲಿ ಈ ಸ್ಥಳ ಗುರುತಿಸಿಕೊಂಡಿದೆ ಎಂದು ಸ್ಥಳೀಯರೊಬ್ಬರು ಹೇಳಿದರು.
ಸಮುದ್ರದ ಹಿನ್ನೀರಿನಲ್ಲಿರುವ ಮ್ಯಾಂಗ್ರೋವ್ ನೋಡಲು ಸುಂದರವಾಗಿತ್ತು. ಆದರೆ ಹಿನ್ನೀರು ಕಲ್ಮಶದಿಂದಲೇ ತುಂಬಿ ಹೋಗಿತ್ತು. ಚರಂಡಿ ನೀರಿನ ವಾಸನೆ ಅಸಹ್ಯ ಹುಟ್ಟಿಸಿತು. (ಪಾಂಡಿಚೆರಿಯಿಂದ ಸುಮಾರು ೨೦ ಕಿಮಿ ದೂರದಲ್ಲಿರುವ ಮ್ಯಾಂಗ್ರೋವ್ ಇನ್ನು ಉತ್ತಮ ಸ್ಥಳ ಎಂಬುದಾಗಿ ಪ್ರವಾಸಿಗರೊಬ್ಬರು ತಿಳಿಸಿದರು.)
ದೋಣಿ ವಿಹಾರದ ನಂತರ ಮಧ್ಯಾಹ್ನ ಸುಮಾರು ೧೨.೨೦ರ ವೇಳೆಗೆ ಪುದುಚೆರಿ ಮ್ಯೂಸಿಯಂಗೆ ಭೇಟಿ. ಮ್ಯೂಸಿಯಂನಲ್ಲಿ ಹಳೆಯ ನಾಣ್ಯಗಳು, ಶಿಲ್ಪಗಳು, ಪ್ರಂಚರು, ಇರೋಪಿಯನ್ನರು ಉಪಯೋಗಿಸುತ್ತಿದ್ದ ವಸ್ತುಗಳ ಸಂಗ್ರಹವಿದೆ. ಚಿಕ್ಕದಾದರು ಆಸಕ್ತಿ ಕೆರಳಿಸುವ ವಸ್ತು ಸಂಗ್ರಹಾಲಯ. ತಲಾ ೧೦ ರೂ ಪ್ರವೇಶ ದರ.
ತದ ನಂತರ ಮಧ್ಯಾಹ್ನದ ಊಟ ಸವಿದಿದ್ದು ಮಿಷನ್ ರಸ್ತೆಯಲ್ಲಿರುವ ಸುರುಗುರು ಸಸ್ಯಹಾರಿ ರೆಸ್ಟಾರೆಂಟ್‌ನಲ್ಲಿ. ಇಲ್ಲಿ ಜನಸಂದಣಿ ಹೆಚ್ಚು. ಆದರೆ ರುಚಿ-ಶುಚಿಯಾದ ಅನೇಕ ಭಕ್ಷ್ಯಗಳು ಲಭ್ಯವಿದೆ.
ಪುದುಚೆರಿಗೆ ವಿದೇಶಿ ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಎಲ್ಲರ ಕಿಸಿಗೆ ತೂಗವ ವಸತಿ ಗೃಹಗಳಿವೆ. ಬಗೆಬಗೆಯ ರೆಸ್ಟಾರೆಂಟ್‌ಗಳಿವೆ. ಪಬ್‌ಗಳಿವೆ. ಆಟೋ ರಿಕ್ಷಾ, ಟ್ಯಾಕ್ಸಿ, ಸ್ಥಳೀಯ ಸಾರಿಗೆ ಸೇವೆ ಇದೆ.
ಅರವಿಲ್ಲೋದ ಚಿನ್ನದ ಗೋಪುರ!
ಊಟದ ನಂತರ ನಮ್ಮ ಪ್ರಯಾಣ ಅರವಿಲ್ಲೋ ಎಂಬ ಗ್ರಾಮದ ಕಡೆಗೆ. ಈ ಗ್ರಾಮ ತಮಿಳುನಾಡು ಮತ್ತು ಪುದುಚೆರಿಯ ನಡುವೆ ಹಂಚಿ ಹೋಗಿದೆ. ಅಲ್ಲಿ ಮಾತ್ರಿ ಮಂದಿರವಿದೆ. ಅರಬಿಂದೋ ಅವರ ಸಹಕಾರ್ಯಕಾರಿಗಳಾಗಿದ್ದ ಮೀರಾ ಅಲ್ಪಾಸ ಎಂಬ ಫ್ರೆಂಚ್ ಮಹಿಳೆಯ ಶ್ರಮದಿಂದ ಮಾತ್ರಿ ಮಂದಿರ ನಿರ್ಮಾಣವಾಗಿದೆ. ಅರಬಿಂದೋ ಮತ್ತು ಮೀರಾ ಅಲ್ಪಾಸ ಅವರು ಮಾನಸ ಯೋಗ ಪದ್ದತಿಯನ್ನು ಆರಂಭಿಸಿದರು ಎನ್ನುತ್ತಾರೆ. ಮಾತ್ರಿ ಮಂದಿರದ ಗೋಲಾಕಾರದ ಗೋಪುರ, ಚಿನ್ನದ ಲೇಪನದ ತಗಡುಗಳಿಂದ ಕಂಗೊಳಿಸುತ್ತದೆ. ಪೂರ್ವ ಅನುಮತಿ ಇದ್ದರೆ ಮಾತ್ರ ಇಲ್ಲಿ ಪ್ರವೇಶ ಇಲ್ಲದಿದ್ದರೆ ಇಲ್ಲ.

ಚಿನ್ನದ ಗೋಲಾಕಾರದ ಗೋಪುರವನ್ನು ಕಾಣಲು ಸುಮಾರು ೧.೫ ಕಿಮೀ ನಷ್ಟು ಕಾಲ್ಮಡಿಗೆಯಲ್ಲಿ ಕ್ರಮಿಸಬೇಕು. ದಾರಿಯುದ್ದಕ್ಕೂ ವಿವಿಧ ಮರ-ಗಿಡಗಳು ಕಾಲ್ಮಡಿಗೆಯ ದಣಿವನ್ನು ತಣಿಸುತ್ತದೆ. ವೀಕ್ಷಣಾ ಸ್ಥಳದಲ್ಲಿ ಸುಮಾರು ೬೦೦ ರಿಂದ ೭೦೦ ಮೀಟರ್ ದೂರದಲ್ಲಿರುವ ಚಿನ್ನದ ಗೋಪುರವನ್ನು ವೀಕ್ಷಿಸಿ ಒಂದಿಷ್ಟು ಫೋಟೋಗಳನ್ನು ತೆಗೆದುಕೊಂಡು ಉಚಿತ ಬಸ್‌ನಲ್ಲಿ ವಾಹನದ ಪಾರ್ಕಿಂಗ್ ಸ್ಥಳಕ್ಕೆ ವಾಪಸ್ಸು ಬಂದೆವು. ವಾಹನ ಪಾರ್ಕಿಂಗ್ ಸ್ಥಳದಿಂದ ವಯಸ್ಸಾದವರಿಗೆ ಹೋಗಿ ಬರಲು ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಇದೆ. ವಾಪಸ್ಸು ಬರಲು ಎಲ್ಲರಿಗೂ ಬಸ್ ವ್ಯವಸ್ಥೆ ಇದೆ.
ವಾಪಸ್ಸು ಪುದುಚೆರಿ ನಗರಕ್ಕೆ ಹಿಂದಿರುಗುವಾಗ ಅಲ್ಲಿನ ಖ್ಯಾತಿ ಪಡೆದಿರುವ ಅರವಿಲ್ಲೋ ಬೇಕರಿಗೆ ಭೇಟಿ. ನಮಗಿಷ್ಟವಾದ ಕೇಕ್ ಖರೀದಿ. ನಂತರ ಗೆಲಾಟೋ ಐಸ್ ಕ್ರೀಂ ಸೇವನೆ. ವಾಪಸ್ಸು ಲಾಡ್ಜ್ಗೆ.
ಮೂರನೆ ದಿನ
ಮೂರನೆ ದಿನ ಸೂರ‍್ಯೋದಯ ವೀಕ್ಷಿಸಲು ಬೆಳಗ್ಗೆ ೫.೩೦ಕ್ಕೆಲ್ಲ ಸೆರೆನಿಟಿ ಬೀಚ್‌ನಲ್ಲಿದ್ದೆವು. ಆದರೆ ಮೋಡಗಳು ಆವರಿಸಿದ್ದರಿಂದ ಸೂರ್ಯನ ಉದಯದ ಸೊಬಗು ಕಾಣಲಿಲ್ಲ. ಆದರೆ ಮುಂಜಾನೆಯ ಸೊಬಗು ಆಸ್ವಾದಿಸಿದೆವು. ಸಮುದ್ರದ ನೀರಿನಲ್ಲಿ ಒಂದಿಷ್ಟು ಹೊತ್ತು ಕಳೆದೆವು. ನಂತರ ಲಾಡ್ಜ್ಗೆ ಮರಳಿ ಸ್ನಾನ ಇತ್ಯಾದಿ ಮುಗಿಸಿ, ಅರಬಿಂದೋ ಆಶ್ರಮಕ್ಕೆ ಭೇಟಿ. ಅಲ್ಲಿ ಅರಬಿಂದೋ ಗುರುಗಳ ಸಮಾದಿ ಇದೆ. ಅರಬಿಂದೋ ಅವರ ಅನುಯಾಯಿಗಳು ಇಲ್ಲಿ ಕೆಲಹೊತ್ತು ಧ್ಯಾನ ಮಾಡಿ ತೆರಳುತ್ತಾರೆ. ಆಶ್ರಮದ ಆವರಣದಲ್ಲಿ ಪುಸ್ತಕದ ಮಳಿಗೆ ಇದೆ. ಅರಬಿಂದೋ ಗುರುಗಳು ಬರೆದ ಅನೇಕ ಪುಸ್ತಕಗಳು ಕನ್ನಡ ಸೇರಿದಂತೆ ಪ್ರಮುಖ ಭಾಷೆಗಳಲ್ಲಿ ಇಲ್ಲಿ ಮಾರಾಟಕ್ಕೆ ಇಡಲಾಗಿದೆ.
ಅರಬಿಂದೋ ಆಶ್ರಮದ ಒಂದಿಷ್ಟು ದೂರದಲ್ಲಿ ಐಸ್ ಬರ್ಗ್ ಎಂಬ ಮಳಿಗೆಯಲ್ಲಿ ರುಚಿಯಾದ ಐಸ್ ಕ್ರೀಂ ಸೇವನೆ. ಅತಿ ಸಮೀಪವಿದ್ದ ಬೀಚ್ ವೀಕ್ಷಣೆ. ಲಾಡ್ಜ್ಗೆ ಹಿಂದುರಿಗೆ ಗಂಟು-ಮೂಟೆ ಕಟ್ಟಿ ಬೆಂಗಳೂರು ಕಡೆಗೆ ಪ್ರಯಾಣ ಆರಂಭ. ದಾರಿ ಮಧ್ಯೆ ತಮಿಳುನಾಡು ರಾಜ್ಯ ಹೆದ್ದಾರಿ ೨೦೩ರಲ್ಲಿ ತಿರುವಕ್ಕರೈ ಎಂಬ ಗ್ರಾಮದಲ್ಲಿರುವ ವಕ್ರಕಾಳಿ ಅಮ್ಮನವರ ದೇವಾಲಯದಲ್ಲಿ ಶ್ರೀಮಾತೆಯ ದರ್ಶನ. ಇದೇ ದೇವಾಲಯದ ಬಳಿ ಇರುವ ಮುನೀಶ್ವರ ದೇವರ ದರ್ಶನ. ನಂತರ ರಾಷ್ಟ್ರಿಯ ಹೆದ್ದಾರಿ ೭೭, ೧೭೯ಎ, ೪೪ರ ಮೂಲಕ ಬೆಂಗಳೂರಿಗೆ ರಾತ್ರಿ ೧೧.೩೦ರ ವೇಳಗೆ ಮರುಳಿದೆವು.
ಇದೇ ಮೊದಲು!
ಪ್ರವಾಸದ ಅನುಭವವನ್ನು ಅಕ್ಷರ ರೂಪದಲ್ಲಿ ಇಳಿಸಿದ್ದು ಇದು ನನ್ನ ಪ್ರಥಮ ಪ್ರಯತ್ನ. ಇಷ್ಟವಾದರೆ ಒಂದು ಲೈಕ್ ಕೊಡಿ, ಪ್ಲೀಸ್!
– ಬಿ.ವಿ.ಸೂರ್ಯ ಪ್ರಕಾಶ್
