ಜಲಪಾತವೇಕೆ ಬಿಳಿಯಾಗಿ ಕಾಣುತ್ತದೆ?

ನೀರಿಗೆ ಬಣ್ಣವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆರೆ, ನದಿಯಲ್ಲಿನ ನೀರು ಬಣ್ಣರಹಿತ. ಮಣ್ಣು ಮಿಶ್ರಗೊಂಡಿದ್ದರೆ ಅಥವಾ ಮಲೀನಗೊಂಡಿದ್ದರೆ ಮಾತ್ರ ನೀರಿನ ಬಣ್ಣ ಬದಲಾಗಿರುತ್ತದೆ ಹೌದಲ್ಲವೇ? ಆದರೆ ಜಲಪಾತವೇಕೆ ಹಾಲಿನಂತೆ ಬಿಳಿಯಾಗಿ ಕಾಣುತ್ತೆ?

Jog Falls, Karnataka

ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳುವ ಮೊದಲು ಗಾಳಿ ಮತ್ತು ನೀರಿನ ವಿಚಾರದ ಬಗ್ಗೆ ಗಮನ ಹರಿಸೋಣ. ಭೂಮಿಯ ಮೇಲೆ ವಾಸಿಸುವ ಮಾನವರಾದ ನಾವು ಮತ್ತು ಪ್ರಾಣಿಗಳು ಉಸಿರಾಟದ ಪ್ರಕ್ರಿಯೆಯಲ್ಲಿ ಗಾಳಿಯನ್ನು ಸೇವಿಸುತ್ತೇವೆ. ಗಾಳಿಯಲ್ಲಿ ಆಮ್ಲಜನಕ ಸೇರಿದಂತೆ ಅನೇಕ ಅನೀಲಗಳಿವೆ. ಗಾಳಿಯಲ್ಲಿನ ಪ್ರಾಣವಾಯು ಆಮ್ಲಜನಕವನ್ನು ಸೇವಿಸುವುದರಿಂದ ನಾವು ಜೀವಿಸುತ್ತಿದ್ದೇವೆ ಅಲ್ಲವೇ? ಜಲವಾಸಿ ಪ್ರಾಣಿಗಳು ಸಹ ಉಸಿರಾಡುತ್ತವೆ, ಆದರೆ ಅವಕ್ಕೆ ಗಾಳಿಯ ಲಭ್ಯವಿಲ್ಲ. ಜಲವಾಸಿಗಳ ಉಸಿರಾಟದ ಪ್ರಕ್ರಿಯೆಯಲ್ಲಿ ಆಮ್ಲಜನಕ ದೊರುಕುವುದಾದರು ಎಲ್ಲಿಂದ?

ನೀರಿನಲ್ಲಿಯೂ ಬಹಳಷ್ಟು ಗಾಳಿ ಕರಗಿರುತ್ತದೆ.  ಅಂದರೆ ನೀರು, ಗಾಳಿಯಲ್ಲಿನ ಅಂಶಗಳ ಮಿಶ್ರಣ ಎಂದಾಯ್ತು ಅಲ್ಲವೇ? ಈ ಸಂಶಯ ನಿವಾರಣೆಗೆ ಇಲ್ಲೊಂದು ಉದಾಹರಣೆ ನೋಡೋಣ. ನೀರು ಕಾಯಿಸುವಾಗ ಉಕ್ಕಿ ಬರುವ  ಗುಳ್ಳೆಗಳನ್ನು ಗಮನಸಿದ್ದೀರಲ್ಲವೇ? ತಾಪ ಹೆಚ್ಚಿದಂತೆಲ್ಲ ನೀರಿನಲ್ಲಿ ಗಾಳಿಯ ಕರಗುಮಿಕೆಯ ಗುಣ ಕುಸಿದು ಆವಿಯಾಗಲಾರಂಭಿಸುತ್ತದೆ. ನೀರಿನಲ್ಲಿರುವ ಗಾಳಿ ಆವಿಯಾಗುವಾಗ ಗುಳ್ಳೆಗಳ ರೂಪ ಪಡೆಯುತ್ತವೆ. ಸಂಶಯ ಪರಿಹಾರವಾಯ್ತಲ್ಲ. ಇನ್ನು ಜಲಪಾತಗಳು ಹಾಲಿನಂತೆ ಬಿಳಿಯಾಗಿ ಕಾಣಿಸುವುದೇಕೆ ತಿಳಿದುಕೊಳ್ಳೋಣ.

ಜಲಪಾತಗಳಲ್ಲಿ ನೀರು ಮೇಲಿನಿಂದ ಧುಮ್ಮಿಕ್ಕಿದಾಗ ನೀರಿನಲ್ಲಿ ಕರಗಿರುವ ಗಾಳಿ ಕೂಡ ಆವಿಯಾಗುತ್ತದೆ! ನದಿಯ ನೀರು ಸರಾಗವಾಗಿ, ಒಂದೇ ಸಮನೆ ಹರಿಯುತ್ತಿರುತ್ತದೆ, ಆದರೆ ನೀರು ಧುಮ್ಮಿಕ್ಕುವಾಗ ಅದರ ಹರಿವಿನಲ್ಲಿ ಕ್ಷಿಪ್ರ ಬದಲಾವಣೆಗಳಾಗುತ್ತವೆ. ಈ ಕ್ಷಿಪ್ರ ಬದಲಾವಣೆಗಳಿಂದಾಗಿ ನೀರಿನಲ್ಲಿರುವ ಗಾಳಿ ಆವಿಯಾಗಲಾರಂಭಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಲಕ್ಷಾಂತರ ಅತಿ ಸಣ್ಣ ಗುಳ್ಳೆಗಳು (ಬಬಲ್ಸ್) ನಿರ್ಮಾಣವಾಗುತ್ತವೆ. ಈ ಗುಳ್ಳೆಗಳು ಕನ್ನಡಿಯಂತೆ ಬೆಳಕನ್ನು ಪ್ರತಿಫಲಿಸುತ್ತವೆ. ನಿಮಗೆ ಹೇಗೂ ಗೊತ್ತು ಎಲ್ಲ ಬಣ್ಣಗಳು ಸೇರಿ ಬಿಳಿಯ ಬಣ್ಣವಾಗುತ್ತೆ ಅಂತ. ಲಕ್ಷಾಂತರ ಗುಳ್ಳೆಗಳು ಬೆಳಕಿನ ಬಣ್ಣಗಳನ್ನು ಪ್ರತಿಫಲಿಸುವುದರಿಂದ ಎಲ್ಲ ಬಣ್ಣಗಳು ಸೇರಿ ಬಿಳಿಯಾಗುತ್ತವೆ. ಹೀಗಾಗಿಯೇ ಜಲಪಾತದಲ್ಲಿ ಧುಮ್ಮಿಕ್ಕುವ ನೀರು ಹಾಲಿನಂತೆ ಕಾಣುತ್ತದೆ.

ಧುಮ್ಮಿಕ್ಕುವ ಜಲಧಾರೆಯ ಧ್ವನಿಯನ್ನು ಆಲಿಸಿದ್ದೀರ? ನೀರು ರಭಸದಿಂದ ಕೆಳಗೆ ಬೀಳುವಾಗ ಅದರೊಳೆಗೆ ವಾತಾವರಣದಲ್ಲಿರುವ ಗಾಳಿ ನುಸುಳುತ್ತದೆ. ಗಾಳಿಯ ನುಸುಳುವಿಕೆಯಿಂದಾಗಿ ಧುಮ್ಮಿಕ್ಕುವ ನೀರಿನ ಧ್ವನಿ ನಿರ್ಮಾಣವಾಗುತ್ತದೆ.

ಬಿ.ವಿ.ಸೂರ್ಯ ಪ್ರಕಾಶ್‍, ರಾಮನಗರ

Leave a comment