ಟೊಮೆಟೊ: ವಿಜ್ಞಾನದ ಪ್ರಕಾರ ಹಣ್ಣು, ನ್ಯಾಯಾಲಯದ ಪ್ರಕಾರ ತರಕಾರಿ!

ಟೊಮೆಟೊ – ಎಲ್ಲರ ನೆಚ್ಚಿನ ತರಕಾರಿ ಅಲ್ಲಲ್ಲ ಹಣ್ಣು ಅಲ್ಲ ತರಕಾರಿ! ಇಂತಹದೊಂದು ವಾದ ಇಡೀ ವಿಶ್ವದಲ್ಲಿ ಜೀವಂತವಾಗಿದೆ.

ವಿಜ್ಞಾನದ ಪ್ರಕಾರ ಟೊಮೆಟೊ ಹಣ್ಣು! ನ್ಯಾಯಾಲಯದ ಪ್ರಕಾರ ತರಕಾರಿ!

ಇದೇನು ವಿಚಿತ್ರ! ಟೊಮೆಟೊ ತರಕಾರಿ ಅನ್ನೋಕೆ ನ್ಯಾಯಾಲಯ ಹೇಳಬೇಕಾ? ಹೌದು ಹೇಳಬೇಕಾಯ್ತು. ಇದು ಹಳೇ ಕಥೆ! 1893ರಲ್ಲೇ ಅಮೇರಿಕಾದ ಸರ್ವೋಚ್ಚ ನ್ಯಾಯಾಲಯ ಟೊಮೆಟೊವನ್ನು ತರಕಾರಿ ಅಂತ ಘೋಷಿಸಿದೆ.

ಟೊಮೆಟೊ ಹಣ್ಣು ಅಂತಾದರೆ ಅದು ಹಣ್ಣಿನಂಗಡಿಯಲ್ಲಿ ಯಾಕೆ ಮಾರೋಲ್ಲ? ಫ್ರೂಟ್‍ ಸಾಲಡ್‍ನಲ್ಲಿ ಏಕೆ ಬಳಸೋಲ್ಲ? ಟೊಮೆಟೊ ತರಕಾರಿಯಾಗಿರುವುದರಿಂದಲೇ ಬದನೆಕಾಯಿ, ಕೋಸು, ಆಲೂಗೆಡ್ಡೆ ಮುಂತಾದ ತರಕಾರಿಗಳ ಜೊತೆ ಮಾರುತ್ತಾರೆ, ಹುಳಿ, ಸಾಂಬರ್‍ನಲ್ಲಿ ಬಳಕೆಯಾಗುತ್ತೆ (ಟೊಮೆಟೊ ರಸಂ ಅಂತು ಅದ್ಬುತ) ಅಂತ ಸುಲಭವಾಗಿ ಹೇಳಿ ವಾದವನ್ನು ಇಲ್ಲೆ ಮೊಟಕುಗೊಳಿಸಿದರೆ ವಿಜ್ಞಾನಿಗಳ ಮಾತಿಗೆ ಬೆಲೆ ಕೊಟ್ಟಂಗೆ ಆಗೋದಿಲ್ಲ ಅಲ್ವ? ಟೊಮೆಟೊ ಮಾತ್ರ ಅಲ್ಲ ಸೌತೆಕಾಯಿ, ಹುರುಳಿಕಾಯಿ, ಬಟಾಣಿ ಕೂಡ ಹಣ್ಣು ಅಂತಾರೆ ವಿಜ್ಞಾನಿಗಳು!

ವಿಜ್ಞಾನಿಗಳ ಪ್ರಕಾರ………..

ಬೀಜಗಳನ್ನು ಹೊಂದಿರುವ ಮತ್ತು ಹೂವಿನಿಂದ ಬೆಳವಣಿಗೆಯಾಗುವ ಸಸ್ಯದ ಯಾವುದೇ ತಿರುಳಿನ ಭಾಗವೇ ಹಣ್ಣು. ಆದರೆ ತರಕಾರಿ ಬೆಳೆಯುವುದು ಮೃದುಕಾಂಡ ಹೊಂದಿರುವ ಸಸ್ಯಗಳಲ್ಲಿ. ಸಸ್ಯಶಾಸ್ತ್ರಜ್ಞರ ಪ್ರಕಾರ ಬೀಜಗಳನ್ನು ಹೊಂದಿರುವ ಸಸ್ಯದ ಅಂಗಭಾಗವೇ ಹಣ್ಣು. ಇದನ್ನು ಆಧಾರವಾಗಿಟ್ಟುಕೊಂಡು ಹಣ್ಣುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ ಅಂತ ಎಲ್ಲೋ ಓದಿದ ನೆನಪು. ಮೊದಲನೆಯದು ಕಿತ್ತಳೆ, ಕಲ್ಲಂಗಡಿ, ಬೆರ್ರಿಗಳು ಮತ್ತು ಸೇಬು (ತಿರುಳು ಇರುವ). ಎರಡನೆಯದು, ಕುಳಿಯಂಥ ಆಕಾರ ಅಥವಾ ಪುಡಿಗಲ್ಲಿನಂಥ ರಚನೆ ಹೊಂದಿರುವ ಹಣ್ಣುಗಳು (ಚೆರ್ರಿ, ಪೀಚ್ ಹಣ್ಣು ಇತ್ಯಾದಿ). ಇನ್ನು ಒಣಹಣ್ಣುಗಳು ಮೂರನೆಯ ಪ್ರಕಾರದವು. ಇದರಲ್ಲಿ ಕಾಳುಗಳು, ಅಂದರೆ ಕಡಲೆಕಾಯಿ, ಹುರುಳಿಕಾಯಿ ಮತ್ತು ಬಟಾಣಿ ಒಳಗೊಳ್ಳುತ್ತವೆ. ಹುರುಳಿಕಾಯಿ ಮತ್ತು ಬಟಾಣಿಯೂ ಹಣ್ಣುಗಳು ಎಂಬುದು ಅಚ್ಚರಿಯಾದರೂ ಸತ್ಯ. ಅವುಗಳಲ್ಲಿ ಬೀಜಗಳು ಇರುವುದರಿಂದ ಕಡಲೆ, ಬಟಾಣಿ, ಹುರುಳಿಕಾಯಿಗಳನ್ನು ಹಣ್ಣಿನ ಗುಂಪಿಗೆ ಸೇರಿಸಿ ಬಿಟ್ಟಿದ್ದಾರೆ ಸಸ್ಯಶಾಸ್ತ್ರಜ್ಞರು. ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಸಸ್ಯಶಾಸ್ತ್ರಜ್ಞರ ಪ್ರಕಾರ ಸೌತೆಕಾಯಿಯೂ ಹಣ್ಣೇ!

ಸಮಸ್ಯೆ ಯಾಕೆ?

ಸಸ್ಯಶಾಸ್ತ್ರಜ್ಞರ ಪ್ರಕಾರ ಟೊಮೆಟೊ ಒಂದು ಹಣ್ಣು. ಇದರಲ್ಲಿ ಅನುಮಾನವೇ ಇಲ್ಲ.

ದೈನಂದಿನ ಅಡುಗೆಯಾದ ಸಾಂಬರ್‍, ಹುಳಿಯಲ್ಲಿ ಬಳಕೆಯಾಗುತ್ತೆ.  ಟೊಮೆಟೊ ಸೂಪ್, ಸಾಸ್ ಮತ್ತು ಕೆಚಪ್‌ಗಳು ಇಲ್ಲದೆ ಸ್ಪಷ್ಟಲ್‍ ಊಟ ಆರಂಭವಾಗೋದೇ ಇಲ್ಲ. ಟೊಮೆಟೊವನ್ನು ಹಣ್ಣು ಅನ್ನೋದಕ್ಕಿಂತ ತರಕಾರಿಯಾಗಿ ಹೆಚ್ಚಾಗಿ ಬಳಸುವುದರಿಂದ ಸಾಮಾನ್ಯ ಜನ (ಅಂದ್ರೆ ನಾನು, ನೀವು) ಅದನ್ನು ತರಕಾರಿ ಅಂತಲೇ ಕರೀತೀವಿ. ಟೊಮೆಟೊವನ್ನು ತರಕಾರಿ ರೀತಿಯಲ್ಲಿ ಬೆಳೆಸೋದರಿಂದ ರೈತರು ಸಹ ಟೊಮೆಟೊ ತರಕಾರಿ ಅಂತಾನೆ ಕರೀತಾರೆ. ಪೌಷ‍್ಠಿಕ ಆಹಾರ ತಜ್ಞರಂತು ಟೊಮೆಟೊವನ್ನು ತರಕಾರಿ ಪಟ್ಟಿಯಲ್ಲೇ ಸೇರಿಸಿಬಿಟ್ಟಿದ್ದಾರೆ.

ಟೊಮೆಟೊ ಹಣ್ಣೊ? ತಕರಾರಿಯೋ? ಎಂಬ ಸಮಸ್ಯೆ ಹುಟ್ಟಿದ್ದು ತೆರಿಗೆ ಕಾರಣಕ್ಕೆ! ಹೌದು ಟೊಮೆಟೊ ದಕ್ಷಿಣ ಅಮೆರಿಕ ಮೂಲದ ಬೆಳೆ. ಎಷ್ಟೋ ಕಾಲದ ಹಿಂದೆಯೇ ಮೆಕ್ಸಿಕೊದಲ್ಲಿ ಟೊಮೆಟೊ ಹೆಚ್ಚು ಬೆಳೆಯುತ್ತಿದ್ದರು. ಕಾಲಕ್ರಮೇಣ ಟೊಮೆಟೊ ಬಳಕೆ ವಿಶ್ವದೆಲ್ಲಡೆ ಆರಂಭವಾಯಿತು.

ಅಮೇರಿಕಾದ ನ್ಯೂಯಾರ್ಕ್‍ನ ಜಾನ್‍ ನಿಕ್ಸ್ ಆಂಡ್‍ ಕಂಪನಿ 1883ರಲ್ಲಿ ಪ್ರಸಿದ್ದ ಕೃಷಿ ಮತ್ತು ತೋಟಗಾರಿಕೆ ಪದಾರ್ಥಗಳ ಮಾರಾಟ ಕಂಪನಿ. ಬೆರ್ಮುಡಾ, ಫ್ಲೋರಿಡಾ, ವರ್ಜಿಯಾನ ಮುಂತಾದ ಕಡೆಯಿಂದ ಟೊಮೆಟೊ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದ್ದರು. ಅಮೇರಿಕಾದ ಅಂದಿನ ಅಧ್ಯಕ್ಷ ಚೆಸ್ಟರ್‍ ಎ ಆರ್ಥರ್‍ ಟಾರಿಫ್ ಆಕ್ಟ್ (ದರ ಕಾನೂನು) ಜಾರಿ ಮಾಡಿ ತರಕಾರಿ ಮೇಲೆ (ಹಣ್ಣಿನ ಮೇಲೆ ಅಲ್ಲ) ಆಮದು ತೆರಿಗೆ ವಿಧಿಸಿದರು. ಜಾನ್‍ ನಿಕ್ಸ್ ಆಂಡ್‍ ಕಂಪನಿ ಟೊಮೆಟೊ ಹಣ್ಣು ಎಂದು ಸಸ್ಯಶಾಸ್ತ್ರಜ್ಞರು ವಿಂಗಡಿಸಿರುವುದರಿಂದ ಮತ್ತು ಅನೇಕ ನಿಘಂಟುಗಳಲ್ಲಿ (ಡಿಕ್ಷನರಿ) ಹಣ್ಣು ಅಂತಲೇ ಹೇಳಿರುವುದರಿಂದ ತೆರಿಗೆ ಅನ್ವಯಿಸೋಲ್ಲ ಎಂದು ವಾದಿಸಿದರು. ಈ ವಾದ ನ್ಯಾಯಾಲಯ ಮೆಟ್ಟಿಲೇರಿತು. ಅಲ್ಲಿನ ಸವೋರ್ಚ್ಛ ನ್ಯಾಯಾಲಯ ಟೊಮೆಟೊವನ್ನು ತೆರಿಗೆ ಕಾರಣಕ್ಕೆ ತರಕಾರಿ ಅಂತ ಕರೆಯೋಕ್ಕೆ ಅಡ್ಡಿಯಿಲ್ಲ  ಎಂದು ತೀರ್ಪು ನೀಡಿದೆ. ಅಂದಿನಿಂದ ವಿಶ್ವದೆಲ್ಲಡೆ ಟೊಮೆಟೊ ಕಾನೂನು ಪ್ರಕಾರ ತರಕಾರಿ, ವಿಜ್ಞಾನದ ಪ್ರಕಾರ ಹಣ್ಣು!  ಭಾರತದಲ್ಲಿ ಟೊಮೆಟೊ ತರಕಾರಿ, ವಿಶ್ವದ ಕೆಲ ರಾಷ್ಟ್ರಗಳಲ್ಲಿ ಹಣ್ಣು. ಅದೇನೆ ಆದ್ರೂ, ಹಣ್ಣು ಮತ್ತು ತರಕಾರಿಗಳು ನಮ್ಮ ಆರೋಗ್ಯಕ್ಕೆ ಬೇಕಾದ ಜೀವಸತ್ವ ಮತ್ತು ಖನಿಜಗಳನ್ನು ಪೂರೈಸುತ್ತವೆ ಇದು ನಿರ್ವಿವಾಧ!

Leave a comment