ನಾಗರೀಕರ ಹಕ್ಕುಗಳ ಬಗ್ಗೆ ತಾತ್ಸರ, ನಗರಸಭೆ ವಿರುದ್ದ ಫೆ.20, 2021ರ ಶನಿವಾರ ರಾಮನಗರ ಬಂದ್

* ಜನ ಜಾಗೃತಿ ವೇದಿಕೆಯ ಆಶ್ರಯದಲ್ಲಿ ನಡೆದ ಸಮಾನ ಮನಸ್ಕ ನಾಗರೀಕರ ಸಭೆಯಲ್ಲಿ ನಿರ್ಧಾರ

ರಾಮನಗರ: ಇ-ಖಾತೆ ಮಾಡಿಕೊಡಲು ವಿಳಂಬ, ಮಿತಿ ಮೀರಿದ ಭ್ರಷ್ಟಾಚಾರ, ಕುಡಿಯುವ ನೀರು ಸಮಸ್ಯೆ, ಕಸ ವಿಲೇವಾರಿಯಲ್ಲಿ ಸಮಸ್ಯೆ ………….ಜಿಲ್ಲಾ ಕೇಂದ್ರ ರಾಮನಗರದ ನಾಗರೀಕರ ಈ ಗೋಳು ಸರ್ಕಾರಕ್ಕೆ ಮುಟ್ಟಿಸಲು ಜನ ಜಾಗೃತಿ ವೇದಿಕೆಯ ಆಶ್ರಯದಲ್ಲಿ ಸಭೆ ಸೇರಿದ್ದ ಸಮಾನ ಮನಸ್ಕರು ಮತ್ತು ನಾಗರೀಕರು ಇದೇ ಫೆ.20ರ ಶನಿವಾರ ರಾಮನಗರ ಬಂದ್‌ಗೆ ನಿರ್ಧರಿಸಿದ್ದಾರೆ.

ಇದೇ ದಿನ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡು ಸರ್ಕಾರ, ಜಿಲ್ಲಾಡಳಿತ, ನಗರಸಭೆಯ ಅಧಿಕಾರಿಗಳ ಗಮನ ಸೆಳೆಯಲು ಸಹ ಸಭೆಯಲ್ಲಿ ನಿರ್ಧಾರವಾಗಿದೆ.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಭಾಗವಹಿಸಿದ್ದ ನೂರಾರು ಮಂದಿ ನಗರಸಭೆಯ ವಿರುದ್ದ ದನಿಗೂಡಿಸಿದರು. 

ಇನ್ನೆಷ್ಟು ದಿನ ಸಹಿಸಲು ಸಾಧ್ಯ? – ಕೆ.ಶೇಷಾದ್ರಿ (ಶಶಿ)

ಸಮಾನ ಮನಸ್ಕರ ಸಭೆಯ ಅಧ್ಯಕ್ಷತೆಯನ್ನುವಹಿಸಿದ್ದ ಜನ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಮಾತನಾಡಿ, ನಗರಸಭೆಯಲ್ಲಿ ನಡೆಯುತ್ತಿರುವ ದುರಾಡಳಿತದಿಂದ ಜನ ಬೇಸೆತ್ತಿದ್ದಾರೆ. 2 – 3 ವರ್ಷಗಳಿಂದ ಜನಪ್ರತಿನಿಧಿಗಳು ಇಲ್ಲದೆ ನಗರದ ನಾಗರೀಕರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ವಿಶೇಷವಾಗಿ ಇ-ಖಾತೆ ಮಾಡಿಕೊಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ನಗರಸಭೆಯ ಅಧಿಕಾರಿಗಳ ವರ್ತನೆಯಿಂದ ನಗರದ ಜನತೆ ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ಪ್ರತಿಭಟನೆ  ಅನಿವಾರ್ಯವಾಗಿದೆ ಎಂದರು. 

ಇ-ಖಾತೆ ಪ್ರತಿಯೊಬ್ಬ ನಗರವಾಸಿಗೂ ಅನಿವಾರ್ಯ ಆದರೆ ಇದೇ ಇಂದು ಸಾಮಾನ್ಯ ನಾಗರೀಕರನ್ನು ಪೆಡಂಬೂತದಂತೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇ-ಖಾತೆ ಇಲ್ಲದೆ ಮನೆಕಟ್ಟಲು ಸಾಲ ದೊರೆಯುತ್ತಿಲ್ಲ. ಕಷ್ಟ ಅಂತ ಆಸ್ತಿಯನ್ನು ಮಾರಾಟ ಮಾಡಲು ಆಗ್ತಿಲ್ಲ ಎಂದು ಜನತೆ ಬೇಸರಗೊಂಡಿದ್ದಾರೆ ಎಂದರು.

ಜನರನ್ನು ಗೋಳು ಹೊಯ್ದುಕೊಳ್ಳಬೇಡಿ ಎಂದು ಸಂಸದರು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ಯಾಗ್ಯೂ ಅಧಿಕಾರಿಗಳು ಎಚ್ಚೆತ್ತು ಕೊಂಡಿಲ್ಲ ಎಂದರು.

ಪಕ್ಷಾತೀತ ಪ್ರತಿಭಟನೆ, ಸ್ವಾರ್ಥವೇನಿಲ್ಲ – ಸ್ಪಷ್ಟನೆ

ನಗರಸಭೆಯ ದುರಾಡಳಿತಕ್ಕೆ  ಎಲ್ಲಾ ಪಕ್ಷದವರು ನೊಂದಿದ್ದಾರೆ. ಹೀಗಾಗಿ ಇದೇ ಫೆ.20ರ ಶನಿವಾರ ರಾಮನಗರ ಬಂದ್‌ಗೆ ಕರೆ ದೊರೆತಿದೆ. ಈ ನಿರ್ಧಾರದ ಹಿನ್ನೆಲೆಯಲ್ಲಿ ಯಾವ ರಾಜಕೀಯವೂ ಇಲ್ಲ, ಇದು ಯಾರ ವಿರುದ್ದವೂ ಪ್ರತಿಭಟನೆ ಅಲ್ಲ, ಯಾವ ಸ್ವಾರ್ಥವೂ ಇಲ್ಲ, ಕೇವಲ ನಗರಸಭಯ ವ್ಯವಸ್ಥೆ ಸುಧಾರಣೆಗಾಗಿ ಈ ಸಂಘಟಿತ ಪ್ರತಿಭಟನೆ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಹಿರಿಯ ವಕೀಲರಾದ ಎಚ್.ವಿ.ಶೇಷಾದ್ರಿ ಐಯ್ಯರ್, ಮುನೀರ್, ನಾಗರೀಕ ಪ್ರಮುಖರಾದ ಡಿ.ಗಿರಿಗೌಡ, ರಾ.ಸಿ.ದೇವರಾಜ್, ಶಿವಕುಮಾರಸ್ವಾಮಿ, ಚಲವರಾಜ್, ಶಿವಶಂಕರ್, ಪಾರ್ವತಮ್ಮ, ಮಂಜುನಾಥ್, ಸಿ.ಕೆ.ನಾಗರಾಜ್, ಮಂಜುನಾಥ್ ಮಾತನಾಡಿ ಪ್ರತಿ‘ಟನೆಯ ಹಾದಿ ಹಿಡಿಯುವುದು ಸೂಕ್ತ ಎಂದರು.

ವ್ಯಾಪಾರಸ್ಥರ ಸಹಕಾರಕ್ಕೆ ಸಭೆ ಮನವಿ

ಫೆ.20ರ ಶನಿವಾರ ರಾಮನಗರ ನಗರ ಬಂದ್‌ಗೆ ವ್ಯಾಪಾರಸ್ಥರು, ರೀಲರ್‌ಗಳು, ಹೋಟೆಲ್, ಬೇಕರಿ ಮಾಲೀಕರು, ಆಟೊರಿಕ್ಷ ಚಾಲಕರು ಹೀಗೆ ಎಲ್ಲಾ ಸಾರ್ವಜನಿಕರು ಶಾಂತಿಯುತ ಬಂದ್‌ಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಸಾವಿರಾರು ಮಂದಿ ಸೇರಿ ಪ್ರತಿಭಟನೆ ನಡೆಸಿ ಸರ್ಕಾರ, ಜಿಲ್ಲಾಡಳಿತ ಮತ್ತು ನಗರಸಭೆಯ ಅಧಿಕಾರಿಗಳ ಗಮನ ಸೆಳೆಯಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Leave a comment